vನಾಲ್ಕು ವರ್ಷ ಪದವಿ ಅಂತ್ಯ!!ವಿದ್ಯಾರ್ಥಿಗಳಿಂದ ವಿಜಯಾಚರಣೆ!v


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.10: ಎಐಡಿಎಸ್ಓ ಜಿಲ್ಲಾ ನೇತೃತ್ವದಲ್ಲಿ ರಾಜ್ಯವ್ಯಾಪಿ ನಾಲ್ಕು ವರ್ಷದ ಪದವಿ ವಿರುದ್ಧ ಸತತ 2 ವರುಷಗಳಿಂದ ನಡೆದ ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಅಭೂತಪೂರ್ವ ಜಯವಾಗಿರುವ ಹಿನ್ನೆಲೆಯಲ್ಲಿ ನಗರದ ಎಸ್.ಜಿ.ಆರ್.ಸಿ.ಎಮ್(ಸಿಟಿ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಐತಿಹಾಸಿಕ ಹೋರಾಟದ ವಿಜಯಾಚರಣೆ ಮಾಡಲಾಯಿತು.
ಈ ಹಿನ್ನೆಲೆಯಲ್ಲಿ AIDSO ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿಗಳ ನಡುವೆ ವಿಜಯದ ಸಂದೇಶವನ್ನು ಕೊಂಡೊಯುತ್ತಾ, ಹೋರಾಟದಲ್ಲಿ ಭಾಗವಹಿಸಿದ ಸಾವಿರಾರು ವಿದ್ಯಾರ್ಥಿಗಳಿಗೆ ಹೋರಾಟದ ಶುಭಾಶಯಗಳನ್ನು ತಿಳಿಸಿತು. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಒಗ್ಗಟ್ಟಿನ ಹೋರಾಟವೊಂದೇ ಪರ್ಯಾಯವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳನ್ನು ಭಾದಿಸುವ ಯಾವುದೇ ಸಮಸ್ಯೆಗಳು ಎದುರಾದರೂ ಅದರ ವಿರುದ್ಧ  ಹೋರಾಡಲು ಸಜ್ಜಾಗಬೇಕು ಎಂಬ ಕರೆ ನೀಡುವ ಮೂಲಕ ಈ ಜಯವನ್ನು ಸಂಭ್ರಮಿಸಲಾಯಿತು ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಹೇಳಿದರು.
ಎಐಡಿಎಸ್ಓ ಉಪಾಧ್ಯಕ್ಷರು ಎಂ.ಶಾಂತಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಐಡಿಎಸ್ಓ ಉಪಾಧ್ಯಕ್ಷರು ಉಮಾ, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.