@h೧೮ = ಗ್ರಾ.ಪಂ.ಸಮರದ ಮತ ಎಣಿಕೆ : ಭಾರೀ ಜನ ಸಂದಣಿ – ಲಘು ಲಾಠಿ ಪ್ರಹಾರ

ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ – ಪರಿಶೀಲನೆ : ಸಣ್ಣ ಪುಟ್ಟ ಗೊಂದಲ
ರಾಯಚೂರು.ಡಿ.೩೦- ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜಿಲ್ಲೆಯ ವಿವಿಧೆಡೆ ಮತ ಎಣಿಕೆ ಕೇಂದ್ರಗಳಲ್ಲಿ ಭಾರೀ ಸಂಖ್ಯೆಯ ಜನ ನೆರೆದಿದ್ದರಿಂದ ಪೊಲೀಸರು ಇವರನ್ನು ನಿಯಂತ್ರಿಸಲು ಅಲ್ಲಲ್ಲಿ ಲಘು ಲಾಠಿ ಪ್ರಹಾರ ಮಾಡಿದಂತಹ ಘಟನೆಗಳು ನಡೆದಿವೆ. ರಾಯಚೂರು ತಾಲೂಕಿನ ಮತ ಎಣಿಕೆ ಕೇಂದ್ರವಾದ ಎಸ್‌ಆರ್‌ಪಿಯು ಕಾಲೇಜು ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪರಿಸ್ಥಿತಿ ಸೂಕ್ಷ್ಮಗೊಂಡಿದೆ. ಪದೇ ಪದೇ ಎಚ್ಚರಿಕೆ ನಂತರವೂ ಜನರು ನಿಷೇಧಿತ ಪ್ರದೇಶದಿಂದ ದೂರ ಉಳಿಯದಿರುವ ಕಾರಣಕ್ಕೆ ಪೊಲೀಸರು ಲಾಠಿ ಪ್ರಹಾರದ ಮೂಲಕ ಜನರನ್ನು ಚದುರಿಸಬೇಕಾಯಿತು. ಪೊಲೀಸರ ಲಾಠಿ ಪ್ರಹಾರದಿಂದ ಅಲ್ಲಿ ನೆರೆದಿದ್ದ ಜನ ದಿಕ್ಕಾಪಾಲಾಗಿ ಓಡಿದಂತಹ ಘಟನೆಗಳು ನಡೆದವು.
ನಗರದಿಂದ ಎಲ್‌ವಿಡಿ ಕಾಲೇಜಿಗೆ ಹೋಗುವ ಎಲ್ಲಾ ರಸ್ತೆಗಳಲ್ಲೂ ಗ್ರಾಮೀಣ ಜನರದ್ದೇ ಸದ್ದು. ಒಂದೊಂದು ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನಿಷೇಧದ ಮಧ್ಯೆಯೂ ಗುಲಾಲ್ ಹಕಿಕೊಂಡು ಕೂಗೂತ್ತಾ, ಸಂಚರಿಸುವ ಜನರ ಗುಂಪು ಸಾಮಾನ್ಯವಾಗಿತ್ತು. ರಾಯಚೂರು ತಾಲೂಕಿನ ೩೩ ಗ್ರಾ.ಪಂ.ಗಳ ಮತ ಎಣಿಕೆ ಪ್ರಕ್ರಿಯೆ ಎಸ್‌ಆರ್‌ಪಿಯು ಕಾಲೇಜಿನಲ್ಲಿ ನಡೆಸಲಾಯಿತು.
ಮುಂಜಾನೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. ಮತ ಪೆಟ್ಟಿಗೆ ಸಂಗ್ರಹಿಸಿದ ಭದ್ರತಾ ಕೊಠಡಿಗಳಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರೋಬೇಷನರಿ ಐಪಿಎಸ್ ಅಧಿಕಾರಿ ಗುಂಜನ್ ಆರ್ಯ, ಡಿವೈಎಸ್ಪಿ ಶಿವನಗೌಡ ಪಾಟೀಲ್, ತಹಶೀಲ್ದಾರ್ ಹಂಪಣ್ಣ ಸಜ್ಜನ್, ನೋಡಲ್ ಅಧಿಕಾರಿ ಮಹೇಂದ್ರಕುಮಾರ ಅವರು ಉಪಸ್ಥಿತರಿದ್ದರು. ಪ್ರತಿ ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ನಂತರ ಮತ್ತೊಂದು ಗ್ರಾ.ಪಂ.ನ ಎಣಿಕೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿತ್ತು. ಆದರೂ, ಸಹ ಭಾರೀ ಸಂಖ್ಯೆಯಲ್ಲಿ ಜನರ ಆಗಮನದ ಕಾರಣ ಹೊರಗಡೆ ಗೊಂದಲಗಳೊಂದಿಗೆ ಒಳಗಿನ ಗೊಂದಲಗಳು ಅಲ್ಲಲ್ಲಿ ಕಂಡು ಬಂದವು.
ಮಾನ್ವಿ ಮತ್ತು ಸಿರವಾರ ತಾಲೂಕುಗಳ ಮತ ಎಣಿಕೆ ಪ್ರಕ್ರಿಯೆ ಭಾಷುಮಿಯಾ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಸಲಾಯಿತು. ಮಾನ್ವಿ ತಾಲೂಕಿನ ೧೭ ಗ್ರಾ.ಪಂ., ಸಿರವಾರ ತಾಲೂಕಿನ ೧೪ ಗ್ರಾ.ಪಂ.ಗಳ ಮತ ಎಣಿಕೆ ನಡೆಸಲಾಯಿತು. ದೇವದುರ್ಗ ತಾಲೂಕಿನ ಮತ ಎಣಿಕೆಯನ್ನು ಡಾನ್ ಭಾಸ್ಕೋ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ೨೮ ಗ್ರಾ.ಪಂ.ಗಳ ಮತ ಎಣಿಕೆ ಕಾರ್ಯಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಲಿಂಗಸೂಗೂರು ತಾಲೂಕಿನ ಮತ ಎಣಿಕೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೈಗೊಳ್ಳಲಾಯಿತು. ೨೯ ಗ್ರಾ.ಪಂ.ಗಳ ಮತ ಎಣಿಕೆ ಪ್ರಕ್ರಿಯೆ ಮುಂಜಾನೆಯಿಂದಲೇ ಆರಂಭಗೊಂಡಿತು. ಸಿಂಧನೂರು ಗ್ರಾ.ಪಂ.ಮತ ಎಣಿಕೆಯನ್ನು ಸರ್ಕಾರಿ ಪದವಿ ಕಾಲೇಜಿನಲ್ಲಿ ಕೈಗೊಳ್ಳಲಾಯಿತು. ಸಿಂಧನೂರು ತಾಲೂಕಿನ ೩೦ ಗ್ರಾ.ಪಂ.ಮತ ಎಣಿಕೆ ಪ್ರಕ್ರಿಯೆಯೂ ವ್ಯವಸ್ಥಿತವಾಗಿ ನಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಸ್ಕಿ ತಾಲೂಕಿನ ಮತ ಎಣಿಕೆ ದೇವಾನಾಮಪ್ರಿಯ ಅಶೋಕ ಪದವಿ ಕಾಲೇಜಿನಲ್ಲಿ ನಡೆಸಲಾಯಿತು. ೨೧ ಗ್ರಾ.ಪಂ.ಗಳ ಈ ಮತ ಎಣಿಕೆ ಪ್ರಕ್ರಿಯೆ ಕೈಗೊಳ್ಳಲಾಯಿತು.
ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಇಂದು ಎಲ್ಲಾ ಮತಗಟ್ಟೆಗಳ ಮುಂದೆ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಇವರನ್ನು ನಿಯಂತ್ರಿಸಲು ಮತ್ತು ಚದುರಿಸಲು ಪೊಲೀಸರು ಹರ ಸಾಹಸ ಮಾಡಬೇಕಾಯಿತು. ಕೆಲವೆಡೆ ಲಾಠಿ ಪ್ರಹಾರವಾದರೇ, ಇನ್ನೂ ಕೆಲವೆಡೆ ತೀವ್ರ ತರದ ಲಾಠಿ ಪ್ರಹಾರ ಮಾಡಬೇಕಾದಂತಹ ಪ್ರಕರಣ ನಡೆಸಲಾಯಿತು. ಈ ಮಧ್ಯೆ ಫಲಿತಾಂಶ ಪ್ರಕಟವಾದ ನಂತರ ಗುಲಾಲ್ ಹಚ್ಚಿಕೊಂಡು ಹೋಗುವ ಬೆಂಬಲಿಗರನ್ನು ನಿಯಂತ್ರಿಸುವ ಮತ್ತೊಂದು ಜವಾಬ್ದಾರಿ ಪೊಲೀಸರ ಮೇಲಿತ್ತು.
ತಮ್ಮ ಬೆಂಬಲಿತ ಅಭ್ಯರ್ಥಿ ಗೆಲ್ಲುತ್ತಾರೋ ಇಲ್ಲವೋ ಎನ್ನುವ ಒತ್ತಡ ಹೊರಗೆ ನೆರೆದಿದ್ದ ಜನರನ್ನು ಕಾಡಿದರೇ, ಇವರನ್ನು ನಿಯಂತ್ರಿಸುವ ಒತ್ತಡ ಪೊಲೀಸರಲ್ಲಿ ಕಂಡು ಬಂದಿತ್ತು. ಮಧ್ಯಾಹ್ನದವರೆಗೂ ಯಾವುದೇ ಗಂಭೀರ ಸ್ವರೂಪದ ಅಪರ, ತಪರಗಳು ಮತ್ತು ಜಗಳದಂತಹ ಘಟನೆ ವರದಿಯಾಗಿರಲಿಲ್ಲ. ಅಲ್ಲಲ್ಲಿ ಕೆಲ ಸಣ್ಣ ಪುಟ್ಟ ತೊಂದರೆಗಳು ಮಾತ್ರ ಕಂಡು ಬಂದಿದ್ದವು.