Àಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ: ಪಿ. ಸುನೀಲಕುಮಾರ

ವಿಜಯಪುರ, ಏ.15-ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರ ಅಧ್ಯಕ್ಷತೆಯಲ್ಲಿಂದು ಸಭೆ ನಡೆಯಿತು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕುಡಿಯುವ ನೀರು ನಿರ್ವಹಣೆ ಕುರಿತಂತೆ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸಕಲ ಕ್ರಮಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕು. ಅವಶ್ಯಕವಿರುವ ವಿವಿಧ ಕೆರೆಗಳನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವ್ಯಾಪ್ತಿಯಲ್ಲಿ ನೀರು ಭರ್ತಿಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಇಂದು ನಡೆದ ಸಭೆಯಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ಬಹು ಹಳ್ಳಿಗಳಿಗೆ ಅನುಕೂಲವಾಗುವ ಅರೇಶಂಕರ ಕೆರೆಯನ್ನು ಬರುವ ಮೇ 25 ರಿಂದ ಭರ್ತಿ ಮಾಡುವ ಕುರಿತಂತೆ ಮಾನ್ಯ ಪ್ರಾದೇಶಿಕ ಆಯುಕ್ತರನ್ನು ಕೋರಲು ನಿರ್ಧರಿಸಲಾಯಿತು.
ಅದರಂತೆ ಮುದ್ದೇಬಿಹಾಳ ತಾಲೂಕಿನ ವಿವಿಧ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗಾಗಿ ನಾರಾಯಣಪೂರ ಹಿನ್ನೀರಿನ ಅವಶ್ಯಕತೆಯಿದ್ದು, ನೀರಿನ ನಿರ್ವಹಣೆಗಾಗಿ ಆಲಮಟ್ಟಿಯಿಂದ ನೀರು ಬಿಡುಗಡೆ ಮಾಡುವಂತೆಯೂ ಕೋರಲು ನಿರ್ಧರಿಸಲಾಯಿತು.
ಮುಂಬರುವ ದಿನಗಳಲ್ಲಿ ಭೀಮಾನದಿ ನೀರು ಕಡಿಮೆಯಾದಲ್ಲಿ ಮಹಾರಾಷ್ಟ್ರದ ಮೂಲಕ ಸೋಲಾಪೂರ ಹಾಗೂ ಅಕ್ಕಲಕೋಟಗಳಿಗೆ ನೀರು ಬಿಡುಗಡೆಯಾದಲ್ಲಿ ಆ ನೀರು ಬಳಸಲು ಮತ್ತು ಅರೇಶಂಕರ ಕೆರೆ ನೀರು ಪೋಲಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸೂಚನೆ ನೀಡಿದರು.
ಅದರಂತೆ ಮುಂಬರುವ ದಿನಗಳಲ್ಲಿ ಬರಗಾಲ ಪೀಡಿತ ಪ್ರದೇಶಗಳ ಘೋಷಣೆ ಆದ ಸಂದರ್ಭದಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಹಾಗೂ ಬಾಡಿಗೆ ಆಧಾರಿತ ಬೋರ್‍ವೆಲ್‍ಗಳಿಗಾಗಿ ನಿಗದಿತ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು. ಆಯಾ ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಭೇಟಿ ಮತ್ತು ಪರಿಶೀಲನಾ ವರದಿ ಆಧಾರದ ಮೇಲೆ ಟ್ಯಾಂಕರ್ ಮೂಲಕ ಉಪವಿಭಾಗಾಧಿಕಾರಿಗಳ ಅನುಮೋದನೆ ಮೇಲೆ ನೀರು ಸರಬರಾಜುಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶ್ರೀ ರಮೇಶ ಕಳಸದ, ಉಪ ವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ಬಲರಾಮ ಲಮಾಣಿ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.