ಬಳ್ಳಾರಿ: ದಿನ ನಿತ್ಯ ಜಿಲ್ಲೆಯ, ನೆರೆಯ ಜಿಲ್ಲೆಗಳ ಮತ್ತು ಆಂದ್ರ ಪ್ರದೇಶದ ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ವಿಮ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ೯೩ ಜನ ತಜ್ಞ ವೈದ್ಯರ ನೇಮಕದ ಪ್ರಕ್ರಿಯೆ ನಡೆದಿದೆ.
ಒಂದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಅನೇಕ ತಜ್ಞ ವೈದ್ಯರುಗಳು ನಿವೃತ್ತಿಯಾದರೂ, ಬಿಟ್ಟು ಹೋದರೂ, ಹೆಚ್ಚಿನ ಹುದ್ದೆಗಳ ಬೇಡಿಕೆ ಬಂದರೂ ಕಳೆದ ೧೫ ವರ್ಷಗಳಿಂದ ನೇಮಕಾತಿ ಹಾಗಿರಲಿಲ್ಲ.
ಒಮ್ಮೆ ಕಳೆದ ಐದು ವರ್ಷಗಳ ಹಿಂದೆ ನಡೆದ ಪ್ರಕ್ರಿಯೆಯಲ್ಲಿ ಅನ್ವಯವಾಗಿದೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅದು ನೆನೆಗುದಿಗೆ ಬಿದ್ದಿತು.
ಈ ಹಿಂದಿನ ಸರ್ಕಾರದಲ್ಲಿನ ವೈದ್ಯಕೀಯ ಸಚಿವರು ಈ ಹುದ್ದೆಗಳ ಭರ್ತಿಗೆ ಆಸಕ್ತಿ ತೋರಿಸಲಿಲ್ಲ. ತೋರಿಸಿದರೂ ತಮ್ಮದೇ ಧೋರಣೆಗಳನ್ನು ಅನುಸರಿಸಲು ಕೇಳಿದ್ದರಿಂದ ವಿಮ್ಸ್ ನಿರ್ದೇಶಕರು ಸಹ ಹುದ್ದೆಗಳ ಭರ್ತಿ ಕೆಲಸಕ್ಕೆ ಹೈ ಹಾಕಲಿಲ್ಲವೆಂದು ಹೇಳಲಾಗುತ್ತಿದೆ. ಅಲ್ಲದೆ ಅಂದಿನ ವೈಧ್ಯಕೀಯ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಸಹ ಹೊಂದಾಣಿಕೆ ಕಾಣದ ಕಾರಣ ಈ ಹುದ್ದೆಗಳ ಭರ್ತಿಗೆ ಮುಂದಾಗಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದರಿಂದಾಗಿ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತಜ್ಞವೈದ್ಯರ ಕೊರತೆ ಹೆಚ್ಚಾಗಿತ್ತು. ಹುದ್ದೆಗಳ ಭರ್ತಿಗೆ ಎಂಸಿಐ ಸಹ ಕಠಿಣವಾಗಿ ಸೂಚಿಸಿತ್ತು.
ಈ ಹಿನ್ನಲೆಯಲ್ಲಿ ಈಗ ೭ ಜನ ಪ್ರೊಫೆಸರ್, ೨೩ ಅಸೋಸಿಯೇಟ್ ಪ್ರೊಫೆಸರ್, ೫೭ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ೬ ಕ್ಯಾಸುವಲಿಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ವಾಕ್ ಇಂಟರ್ ವಿವ್ ಕರೆಯಲಾಗಿದೆ.
ಈ ತಿಂಗಳ ೨೨ ಮತ್ತು ೨೩ ರಂದು ಸಂದರ್ಶನದ ದಿನಾಂಕ ನಿಗಧಿ ಮಾಡಿದೆ.
ಹೊಸದಾಗಿ ಬಂದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮತ್ತು ವಿಮ್ಸ್ ನಿರ್ದೇಶಕರು ಆಸಕ್ತಿವಹಿಸಿ ವೈದ್ಯರ ಹುದ್ದೆಗಳ ಭರ್ತಿಗೆ ಮುಂದಾಗಿದ್ದಾರೆ.
ಹುದ್ದೆಗಳಲ್ಲಿ ಬಹುತೇಕ ೩೭೧ ಜೆ ನಡಿಯಲ್ಲಿ ಮೀಸಲಾಗಿದ್ದು ಈ ಭಾಗದ ವೈದ್ಯರಿಗೆ ಹೆಚ್ಚಿನ ಸಹಕಾರಿಯಾಗಲಿದೆ.
ದಿನಾಂಕ ಒಂದಿಷ್ಟು ಮುಂದೆ ಹೋಗುವ ಸಾಧ್ಯತೆ ಇದೆ. ಇಂದು ಸಂಜೆ ಒಳಗೆ ಅಂತಿಮಗೊಳ್ಳಲಿದೆಂಬ ಮಾತುಗಳು ಕೇಳಿ ಬಂದಿವೆ.
ಕಳೆದ ೧೫ ವರ್ಷದಿಂದ ವಿಮ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಆಗಿರಲಿಲ್ಲ. ಈಗ ಭರ್ತಿಗೆ ಸಂದರ್ಶನ ಕರೆದಿದೆ. ಇವುಗಳ ನೇಮಕ ಪೂರ್ಣಗೊಂಡರೆ ಉಪನ್ಯಾಸ ಮತ್ತು ಚಿಕಿತ್ಸಾ ಕಾರ್ಯಕ್ಕೆ ಸಹಕಾರಿ ಯಾಗಲಿದೆ.

ಡಾ.ಟಿ. ಗಂಗಾಧರ ಗೌಡ
ನಿರ್ದೇಶಕರು, ವಿಮ್ಸ್, ಬಳ್ಳಾರಿ.