90 ವರ್ಷ ವೃದ್ಧನ ಎಡ ಚಪ್ಪೆಯ ಯಶಸ್ವಿ ಶಸ್ತ್ರಚಿಕಿತ್ಸೆ

ವಿಜಯಪುರ:ಮಾ.15: ಎಡ ಚಪ್ಪೆ ಎಲುಬು ಮುರಿದುಕೊಂಡಿದ್ದ 90 ವರ್ಷದ ವೃದ್ಧನಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಎಲುಬು ಮರುಜೋಡಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗುಂದವಾನ ಗ್ರಾಮದ ಮಾರುತಿ ವಾಗಮೋರೆ ಮನೆಯಲ್ಲಿ ಬಿದ್ದು ಎಡ ಚಪ್ಪೆಯ ಎಲುಬು ಮುರಿದುಕೊಂಡಿದ್ದರು. ನಡೆಯಲು ಬಾರದೇ ಪರದಾಡುತ್ತಿದ್ದ ಇವರಿಗೆ ಹೃದಯ ಸಂಬಂಧಿ ಕಾಯಿಲೆ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯಗೆ ದಾಖಲಾದ ಇವರನ್ನು ಎಲುಬು, ಕೀಲು ಮತ್ತು ಬೆನ್ನೆಲುಬು ನರಗಳ ತಜ್ಞ ಡಾ. ರವಿಕುಮಾರ ಬಿರಾದಾರ ಶಸ್ತ್ರಚಿಕಿತ್ಸೆ ನಡೆಸಿ ಎಡ ಚಪ್ಪೆಯನ್ನು ಮರುಜೋಡಣೆ ಮಾಡಿದ್ದಾರೆ.

ಉಚಿತವಾಗಿ ಈ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದ್ದು, ಈಗ ವೃದ್ದ ಆರೋಗ್ಯದಿಂದ ಇದ್ದಾರೆ. ಅಲ್ಲದೇ, ಮೊದಲಿನಂತೆ ನಡೆಯುತ್ತಿರುವುದನ್ನು ಕಂಡು ಆತನ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಡಾ. ವಿಜಯ ಕಟ್ಟಿಯವರು ಅರವಳಿಕೆ ನೀಡಿದ್ದರು. ವೈದ್ಯರ ಈ ಸಾಧನೆಯನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಪ್ರಿನ್ವಿಪಾಲ್ ಡಾ. ಅರವಿಂದ ಪಾಟೀಲ ಶ್ಲಾಘಿಸಿದ್ದಾರೆ.