9, 10ನೇ ತರಗತಿಯವರೆಗೆ ಆರ್‍ಟಿಇ ಅಡಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಸೌಲಭ್ಯ ವಿಸ್ತರಿಸಲು ಬಳ್ಳಾರಿ ಆಗ್ರಹ

ಕಲಬುರಗಿ:ಅ.14: ಆರ್‍ಟಿಇ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿಯವರೆಗೂ ಸಹ ವಿದ್ಯಾಭ್ಯಾಸ ಮುಂದುವರೆಸುವ ದಿಸೆಯಲ್ಲಿ ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ಜಗದೀಶ್ ಬಳ್ಳಾರಿಯವರು ಒತ್ತಾಯಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯ ಸರ್ಕಾರದ ಶಿಕ್ಷಣ ನೀತಿ ಖಂಡನೀಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ನಗರದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್‍ಟಿಇ ಅಡಿಯಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳು 8ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಲು ಮಾತ್ರ ಅನುಕೂಲ ಇದೆ. 8ನೇ ತರಗತಿ ಉತ್ತೀರ್ಣರಾದ ನಂತರ 9ನೇ ತರಗತಿಯಲ್ಲಿ ವ್ಯಾಸಂಗ ಮಾಡಲು ದಾಖಲೆ ಪಡೆಯಬೇಕಾದರೆ ಸಾವಿರಾರು ರೂ.ಗಳ ಶುಲ್ಕ ಕೊಡಬೇಕಾಗುತ್ತದೆ. ಇಲ್ಲವಾದರೆ ಅವರಿಗೆ 9ನೇ ತರಗತಿಯವರೆಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಇದರಿಂದ ಅವರ ಶಿಕ್ಷಣವು ಅಲ್ಲಿಗೆ ನಿಂತು ಬಿಡುತ್ತದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ, ಚಿಂತೆ ಇಲ್ಲ. ಆದ್ದರಿಂದ ಕೂಡಲೇ ಆರ್‍ಟಿಇ ಅಡಿಯಲ್ಲಿ ಒಂದನೇ ತರಗತಿಯಲ್ಲಿ ಅಥವಾ ಎಲ್‍ಕೆಜಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನಿರಂತರವಾಗಿ ಹತ್ತನೇ ತರಗತಿಯವರೆಗೆ ಅವರು ಆರ್‍ಟಿಇ ಅಡಿ ವಿದ್ಯಾಭ್ಯಾಸ ಮಾಡಲು ನಿಯಮವನ್ನು 9 ಮತ್ತು 10ನೇ ತರಗತಿಗಳಿಗೆ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಇರುವ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಭಾರೀ ಶುಲ್ಕದ ಹೊರೆ ಹೊರಿಸಲಾಗುತ್ತಿದೆ. ಸಾವಿರಾರು ರೂ.ಗಳ ಶುಲ್ಕ ಕೇಳುತ್ತಾರೆ. ಈ ಹಿಂದೆ 2019ರಿಂದ ಇಲ್ಲಿಯವರೆಗೆ ಕೋವಿಡ್-19ದಿಂದ ಜನ ಸಾಮಾನ್ಯರಿಗೆ, ಕಾರ್ಮಿಕರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಉದ್ಯೋಗ ಇಲ್ಲದೇ ಬಹಳ ತೊಂದರೆಯಾಗಿದೆ. ಆರ್ಥಿಕವಾಗಿ ತುಂಬಾ ದುರ್ಬಲರಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ಹಿಂದಿನ ಎರಡು ವರ್ಷಗಳ ಶುಲ್ಕ ಕಟ್ಟುವ ಹೊಣೆಗಾರಿಕೆಯನ್ನು ಸರ್ಕಾರವೇ ವಹಿಸಿಕೊಂಡು ಖಾಸಗಿ ಶಾಲೆಗಳಿಗೆ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಸ್ಕಾಲರ್‍ಶಿಪ್ ಮುಖಾಂತರ ಕರ್ನಾಟಕ ಸರ್ಕಾರವೇ ಭರಿಸುವಂತೆ ಒತ್ತಾಯಿಸಿದ ಅವರು, ಶುಲ್ಕ ಕಟ್ಟಲು ಆಗದೇ ವಿದ್ಯಾರ್ಥಿಗಳ ಪೋಷಕರು ಖಾಸಗಿ ಶಾಲೆಯಿಂದ ತಮ್ಮ ಮಕ್ಕಳನ್ನು ತೆಗೆದು ಸರ್ಕಾರಿ ಶಾಲೆಗೆ ಸೇರಿಸುವ ಸಲುವಾಗಿ ವರ್ಗಾವಣೆ ಪತ್ರ ಕೇಳಿದರೆ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯವರು ಟಿಸಿ ಕೊಡಲು ಸಾವಿರಾರು ರೂ.ಗಳನ್ನು ಕೇಳುತ್ತಾರೆ. ಶುಲ್ಕ ಕೊಡದೇ ಇದ್ದಲ್ಲಿ ಟಿಸಿ ಕೊಡುವುದಿಲ್ಲ ಇಲ್ಲವೇ ಪರೀಕ್ಷೆ ಕಟ್ಟಲು ಬಿಡುವುದಿಲ್ಲ ಎಂದು ಅವರು ಹೇಳಿದರು.
ಹೀಗಾಗಿ ವಿದ್ಯಾರ್ಥಿಗಳ ಶಿಕ್ಷಣ ಹಾಳಾಗುತ್ತಿದೆ. ಇಂತಹ ನೂರಾರು ಪ್ರಕರಣಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹತ್ತಿರ ಬಂದರೂ ಸಹ ಅಂತಹ ಪೋಷಕರು ಸಹ ಗೋಳು ಕೇಳುವುದಿಲ್ಲ. ಬಡ ವಿದ್ಯಾರ್ಥಿಗಳು ಹಾಗೂ ಬಡ ವಿದ್ಯಾರ್ಥಿಗಳ ತಂದೆ- ತಾಯಿಗಳು ಬಹಳ ಸಂಕಷ್ಟದಲ್ಲಿದ್ದಾರೆ. ಬಡ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುವ ಸ್ಥಿತಿಯಲ್ಲಿದೆ. ಕಾರಣ ಸರ್ಕಾರ ಎಚ್ಚೆತ್ತು ದೆಹಲಿ ಮಾದರಿಯಲ್ಲಿ ಶಿಕ್ಷಣ ಜಾರಿ ಮಾಡುವಂತೆ ಅವರು ಒತ್ತಾಯಿಸಿದರು.
ದೆಹಲಿ ಸರ್ಕಾರದ ಶಿಕ್ಷಣ ನಿಯಮಗಳನ್ನು ತರಿಸಿಕೊಂಡು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಯಾವ ಆಧಾರದ ಮೇಲೆ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡುತ್ತಿದ್ದಾರೆಯೋ ಅದೇ ಮಾದರಿಯಲ್ಲಿ ಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ಹಂತ, ಹಂತವಾಗಿ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹ ಸಂಚಾಲಕ ಸೈಯದ್ ಬಾಬರ್ ಮುಸ್ತಫಾ, ಜಿಲ್ಲಾ ಕಾರ್ಯದರ್ಶಿ ಶೇಖರ್‍ಸಿಂಗ್, ವಸಂತಕುಮಾರ್ ಪ್ರತಾಪೆ, ವಿಜಯಕುಮಾರ್ ಚಿಂಚನಸೂರ್, ಸೈಯದ್ ವಸೀಮ್ ಅಕ್ರಮ್ ಮುಂತಾದವರು ಉಪಸ್ಥಿತರಿದ್ದರು.