9 ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ

ಕೋಲಾರ, ಜು.೨೧: ಜಿಲ್ಲೆಯ ವಿವಿಧೆಡೆ ಚಾಮುಂಡೇಶ್ವರಿ ಜಯಂತಿ ಅಂಗವಾಗಿ ಶಕ್ತಿ ದೇವತೆಗಳಾದ ಕೋಲಾರಮ್ಮ, ಗಲ್ ಪೇಟೆಯ ಚಾಮುಂಡೇಶ್ವರಿ, ಜಯನಗದ ಸಫಲಮ್ಮ, ಕಿಲಾರಿಪೇಟೆಯ ಸತ್ಯಮ್ಮ, ಮೇಡಿತಂಬಿಹಳ್ಳಿಯ ಚೌಡೇಶ್ವರಿ ದೇವಾಲಯ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ, ಅಲಂಕಾರ,ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಚಾಮುಂಡೇಶ್ವರಿ ಜನ್ಮದಿನದಂದು ಒಂಬತ್ತು ಶಕ್ತಿದೇವತೆಗಳ ಜನ್ಮದಿನೋತ್ಸವವನ್ನೂ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದೇವತೆ ಕೋಲಾರಮ್ಮ ದೇವಾಲಯದಲ್ಲಿ ಮುಂಜಾನೇಯಿಂದಲ್ಲೇ ಪೂಜಾ ಕೈಂಕರ್ಯಗಳು ಆರಂಭವಾದವು.
ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮ, ಅಷ್ಟಾವಧಾನ ಸೇವೆ ಇತರ ಸೇವೆಗಳು, ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ದೇವಾಲಯ ಒಳಾಂಗಣ ಹಾಗೂ ಹೊರಭಾಗದಲ್ಲೂ ಅಲಂಕಾರಿಕ ಹೂವುಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು.
ಅನೇಕ ಮಂದಿ ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಾಲಯಕ್ಕೆ ದೇವರ ದರ್ಶನ ಪಡೆದರೆ ಮಹಿಳೆಯರು ದೀಪಗಳನ್ನು ಬೆಳಗಿದರು.
ನಗರದ ಜಯನಗರದ ೭ನೇ ಕ್ರಾಸ್‌ನಲ್ಲಿರುವ ಸಫಲಮ್ಮ ದೇವಾಲಯದಲ್ಲಿ ಚಾಮುಂಡೇಶ್ವರಿ ಜಯಂತಿ ಅಂಗವಾಗಿ ತಾಯಿಗೆ ವಿಶೇಷ ಪೂಜೆ, ಅಭಿಷೇಕ,ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ, ಹೋಮ,ಹವನ ಮತ್ತಿತರ ಕಾರ್ಯಕ್ರಮಗಳು ದೇವಾಲಯದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ನೇತೃತ್ವದಲ್ಲಿ ನಡೆಯಿತು.
ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ನೂರಾರು ಮಂದಿ ಸಾಗಿ ಬಂದಿದ್ದು, ಇಡೀ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಸಫಲಮ್ಮ ದೇವಿ ಭಕ್ತ ಮಂಡಳಿ ವ್ಯವಸ್ಥೆ ಮಾಡಿತ್ತು.
ತಾಲ್ಲೂಕಿನ ಮೇಡಿತಂಬಿಹಳ್ಳಿಯಲ್ಲಿರುವ ಪುರಾತನ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ತಾಯಿಗೆ ಹರಿಸಿನ, ಗಂಧದ ಅಲಂಕಾರ ಮಾಡಲಾಗಿತ್ತು. ದೇವಾಲಯದ ಭಕ್ತರು ಇಡೀ ದಿನ ಚೌಡೇಶ್ವರಿ ದೇವಿಯ ಹೆಸರಿನಲ್ಲಿ ಪ್ರಸಾದ ವಿನಿಯೋಗ ಏರ್ಪಡಿಸಿದ್ದು, ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ತಾಯಿಯ ದರ್ಶನ ಪಡೆದರು.
ನಗರದ ಪ್ರಸಿದ್ದ ಕಿಲಾರಿಪೇಟೆಯಲ್ಲಿ ಸತ್ಯಮ್ಮ ದೇವಿಗೆ ಚಾಮುಂಡೇಶ್ವರಿ ಜಯಂತಿ ಅಂಗವಾಗಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಇದೇ ರೀತಿ ಅಮ್ಮವಾರಿಪೇಟೆಯ ಗಂಗಮ್ಮ ದೇವಸ್ಥಾನ, ಗಲ್‌ಪೇಟೆಯ ಚಾಮುಂಡೇಶ್ವರಿ ದೇವಾಲಯ, ನಗರದ ಟೇಕಲ್ ರಸ್ತೆಯಲ್ಲಿರುವ ರೇಣುಕಾ ಯಲ್ಲಮ್ಮ,ಮಾರೆಮ್ಮ ದೇವಸ್ಥಾನ ಸೇರಿದಂತೆ ಎಲ್ಲ ಶಕ್ತಿದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.