9 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ:ಬೊಮ್ಮಾಯಿ

ಬೆಂಗಳೂರು, ಮೇ ೨೯- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದಿಗೆ ೯ ವರ್ಷ ಪೂರ್ಣಗೊಳಿಸಿದ್ದು, ೯ ವರ್ಷಗಳಲ್ಲಿ ದೇಶ ಸಾಕಷ್ಟು ಬದಲಾಗಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಉನ್ನತಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿಲೇಖಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಇವರುಗಳ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿತ್ತು. ಸ್ಪಷ್ಟವಾದ ನೀತಿ ಇರಲಿಲ್ಲ. ಭ್ರಷ್ಟಾಚಾರ ಹಗರಣಗಳಿಂದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಪ್ರಧಾನಿ ಮೋದಿ ಅವರು, ಎಲ್ಲವನ್ನು ಸರಿದೂಗಿಸಿ ದೇಶವನ್ನು ಪ್ರಗತಿ ಹಾದಿಯಲ್ಲಿ ಮುನ್ನಡೆಸಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ಮೂಲಭೂತ ಬದಲಾವಣೆಯೊಂದಿಗೆ ಭಾರತದ ಆರ್ಥಿಕತೆ, ಶೈಕ್ಷಣಿಕ ಪ್ರಗತಿಗೂ ಹೆಚ್ಚು ಒತ್ತು ನೀಡಿದರು. ಆರ್ಟಿಕಲ್ ೩೭೦ ರದ್ದು ಮಾಡಿ ಏಕತೆ, ಅಖಂಡತೆಯನ್ನು ಎತ್ತಿ ಹಿಡಿದರು. ಎಸ್‌ಟಿಯನ್ನು ಜಾರಿಗೆ ತಂದರು ಎಂದು ಹೇಳಿದರು.
ಜಿಎಸ್‌ಟಿ ಜಾರಿಯಾದ ನಂತರ ಕರ್ನಾಟಕಕ್ಕೆ ಹೆಚ್ಚಿನ ಹಣ ಬಂದಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ೨ನೇ ಸ್ಥಾನದಲ್ಲಿದೆ ಎಂದರು.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಕರ್ನಾಟಕ ಈ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ. ಈಗ ನಾವು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದೇವೆ ಎಂದರು.
ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚನ ಆದ್ಯತೆ ನೀಡಿದ್ದಾರೆ. ಕಳೆದ ೯ ವರ್ಷದಲ್ಲಿ ೫ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ೭೦ ವರ್ಷದಲ್ಲಿ ನಾಲ್ಕೂವರೆ ಸಾವಿರ ಕಿ.ಮೀ. ರಸ್ತೆ ನಿರ್ಮಾಣವಾಗಿತ್ತು ಎಂದರು.
ಕರ್ನಾಟಕದ ಅಭಿವೃದ್ಧಿಗೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹೆಚ್ಚಿನ ನೆರವು ನೀಡಿದೆ. ಬೆಂಗಳೂರಿನ ಸಬ್ ಅರ್ಬನ್ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಹಣಕಾಸು ನೆರವು ಒದಗಿಸಿದ ಹಾಗೆಯೇ ಮೆಟ್ರೋ ನಿರ್ಮಾಣಕ್ಕೂ ಹಣ ನೀಡಿದ್ದಾರೆ. ೪ ವೈದ್ಯಕೀಯ ಕಾಲೇಜು, ಐಐಟಿ, ಕರಾವಳಿ ಅಭಿವೃದ್ಧಿಗೂ ಕೇಂದ್ರ ನೆರವು ನೀಡಿದೆ. ಕಲಬುರುಗಿಯಲ್ಲಿ ಜವಳಿ ಪಾರ್ಕ್‌ಗೂ ಅನುಮತಿ ನೀಡಿದೆ. ಹಾಗೆಯೇ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿಲ್ಲಿ ೫೪ ಲಕ್ಷ ರೈತರಿಗೆ ೧೬ ಸಾವಿರ ಕೋಟಿ ರೂ. ತಲುಪಿಸಿದೆ. ವಸತಿ ಯೋಜನೆಗೂ ಕೇಂದ್ರ ಆದ್ಯತೆ ನೀಡಿದೆ. ಮುದ್ರಾ ಯೋಜನೆಯಡಿ ೬೦ ಲಕ್ಷ ಉದ್ಯಮಿಗಳಿಗೆ ನೆರವು ಒದಗಿಸಿದೆ ಎಂದರು.
ಭಾರತ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಹೊಂದಿದ್ದು, ೫ ಟ್ರಿಲಿಯನ್ ಆರ್ಥಿಕತೆ ಮಾಡುವ ಗುರಿಯುನ್ನು ಪ್ರಧಾನಿ ಮೋದಿ ಇಟ್ಟುಕೊಂಡಿದ್ದಾರೆ. ಕರ್ನಾಟಕವೂ ೧ ಟ್ರಿಲಿಯನ್ ಆರ್ಥಿಕ ಶಕ್ತಿಯನ್ನು ಮುಟ್ಟಲಿದೆ ಎಂದು ಅವರು ಹೇಳಿದರು.