
ರಾಯಚೂರು, ಜ.14: ಜಿಲ್ಲೆಯಲ್ಲಿ ಕೋವಿಡ್ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮ ಇದೇ 16ರಿಂದ ಆರಂಭವಾಗಲಿದ್ದು, ಜಿಲ್ಲೆಗೆ ಗುರುವಾರ ಸಂಜೆ 9 ಸಾವಿರ ಕೋವಿಶಿಲ್ಡ್ ಲಸಿಕೆಗಳು ಅತ್ಯಂತ ಸುರಕ್ಷತಾ ಭದ್ರತೆಯೊಂದಿಗೆ ವಾಹನದಲ್ಲಿ ಆಗಮಿಸಿವೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹಾಗೂ ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ವಿಜಯ ಅವರು ಕೋವಿಶಿಲ್ಡ್ ಲಸಿಕೆ ಹೊತ್ತುತಂದ ವಾಹನದ ಬೀಗವನ್ನು ತೆರೆಯುವುದರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಶೀಥಲೀಕರಣ ಘಟಕದಲ್ಲಿ ಸಂಗ್ರಹಿಸಿಡಲಾಯಿತು.
ಡಿಎಚ್ ಒ ಕಚೇರಿಯಲ್ಲಿ ಆರತಿ ಬೆಳಗಿ ವ್ಯಾಕ್ಸಿನ್ ವಾಹನವನ್ನು ಬರಮಾಡಿಕೊಳ್ಳಲಾಯಿತು. ಸಾಂಕೇತಿಕವಾಗಿ ಕೋವಿಡ್ ಲಸಿಕಾ ಬಾಕ್ಸವೊಂದನ್ನು ಡಿಎಚ್ಒ, ಜಿಲ್ಲಾ ಆರ್ಸಿಎಚ್ ಅಧಿಕಾರಿಗಳು ಸ್ವೀಕರಿಸಿ, ಅದನ್ನು ಡಿಎಚ್ ಒ ಕಚೇರಿಯ ಶೀಥಲೀಕರಣ ಘಟಕದಲ್ಲಿ ಇರಿಸಿದರು.
ನಂತರ ಡಿಎಚ್ ಒ ಮಾತನಾಡಿ, ಜಿಲ್ಲೆಗೆ ಇಂದು 9 ಸಾವಿರ ಕೋವಿಶಿಲ್ಡ್ ಲಸಿಕೆ ಬಂದಿದ್ದು,ಅವುಗಳನ್ನು ಸುರಕ್ಷಿತವಾಗಿ ಶಿಥಲೀಕರಣ ಘಟಕದಲ್ಲಿ ಸಂಗ್ರಹಿಸಿಡಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ನೀಡುವ ಕೇಂದ್ರಗಳಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 600 ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಲಾಗಿದೆ ಎಂದರು.
ಜ.16ರಂದು ಬೆಳಗ್ಗೆ 11ಕ್ಕೆ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಆನ್ಲೈನ್ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ರಿಮ್ಸ್ ಸೇರಿದಂತೆ ತಾಲೂಕು ಸಾರ್ವಜನಿಕ ಆಸ್ಪತ್ರೆಗಳು, ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಸೇರಿದಂತೆ 71 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇಲ್ಲಿ ಈಗಾಗಲೇ ನೋಂದಾಯಿಸಲಾಗಿರುವ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಇಡೀ ಕಾರ್ಯಕ್ರಮ ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತದ ವತಿಯಿಂದ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಫಾರ್ಮಾಸಿಸ್ಟ್ ಆಶ್ಪಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.