ಬೆಳೆ ಸಮೀಕ್ಷೆ ವ್ಯತ್ಯಾಸ: ಮರು ಪರಿಶೀಲಿಸಿ ಬೆಳೆವಿಮೆ ಪರಿಹಾರ ವಿತರಣೆಗೆ ಕ್ರಮ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಮೇ.8; ಬೆಳೆ ಸಮೀಕ್ಷೆಯಲ್ಲಿ ಉಂಟಾದ ವ್ಯತ್ಯಾಸದಿಂದ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು, ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗದಿರುವುದು ಗಮನಕ್ಕೆ ಬಂದಿದೆ. ಈ ಭಾಗದ ರೈತರ ಜಮೀನುಗಳಲ್ಲಿ ಪುನಃ ಮರು ಪರಿಶೀಲಿಸಿ ಬೆಳೆವಿಮೆ ಪರಿಹಾರ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರೈತರಿಗೆ ಭರವಸೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಬೆಳೆವಿಮೆ ಸಂಬAಧ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆವಿಮೆ ವಿತರಣೆಯಾಗದಿರುವುದು, ಬೆಳೆವಿಮೆ ಹಣ ಪಾವತಿಯಲ್ಲಿಯೂ ವ್ಯತ್ಯಾಸ ಆಗಿರುವುದು ಹಾಗೂ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಡಾಟಾ ಎಂಟ್ರಿ ಮಾಡುವ ಸಂದರ್ಭದಲ್ಲಿ ಆಗಿರುವ ತಪ್ಪುಗಳು ಸಹ ಗಮನಕ್ಕೆ ಬಂದಿವೆ. ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ಆಗಿರುವ ವ್ಯತ್ಯಾಸದ ಕುರಿತು ಈಗಾಗಲೇ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪುನಃ ಪರಿಶೀಲಿಸಿ, ಬೆಳೆವಿಮೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.