85 ಲಕ್ಷ ಮಂದಿಗೆ ಸೋಂಕು 79 ಲಕ್ಷ ಜನ ಚೇತರಿಕೆ

ನವದೆಹಲಿ, ನ. ೯- ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೂ ಏರಿಕೆಯಾಗುತ್ತಲೇ ಇದೆ. ಕಳೆದ ೨೪ ಗಂಟೆಗಳಲ್ಲಿ ೪೫,೯೦೩ ಹೊಸಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ ೮೫,೫೩,೬೫೭ಕ್ಕೆ ಏರಿಕೆಯಾಗಿದೆ.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು, ೭,೭೪೫ ಹೊಸಪ್ರಕರಣಗಳೊಂದಿಗೆ ೪,೩೮,೫೨೯ಕ್ಕೆ ಸೋಂಕು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
೨೪ ಗಂಟೆಗಳಲ್ಲಿ ೪೮,೪೦೫ ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ ೭೯,೧೭,೩೭೩ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಚೇತರಿಕೆ ಪ್ರಮಾಣ ಶೇ. ೯೨.೫೬ ರಷ್ಟಿದೆ.
ದೇಶದಲ್ಲಿ ಕಳೆದ ಒಂದು ದಿನದಲ್ಲಿ ೪೯೦ ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೂ ಮೃತಪಟ್ಟವರ ಸಂಖ್ಯೆ ೧,೨೬,೬೧೧ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ೫,೦೯,೬೭೩ ಸಕ್ರಿಯ ಪ್ರಕರಣಗಳಿವೆ.
೧೧.೮೫ ಕೋಟಿ ಪರೀಕ್ಷೆ
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೮,೩೫,೪೦೧ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇದುವರೆಗೂ ೧೧ ಕೋಟಿ ೮೫ ಲಕ್ಷದ ೭೨ ಸಾವಿರದ ೧೯೨ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಮೂರು ವಾರಗಳಲ್ಲಿ ಚೇತರಿಕೆ ಅಧಿಕ
ಕಳೆದ ಮೂರು ವಾರಗಳಲ್ಲಿ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಅಧಿಕವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ ೨೧ರ ತನಕ ಶೇ. ೭.೯೪ ರಷ್ಟಿದ್ದ ಸೋಂಕಿನ ಪ್ರಮಾಣ ನ. ೮ರ ತನಕ ಶೇ. ೭.೨೩ಕ್ಕೆ ಕುಸಿದಿದೆ. ದಿನೇದಿನೇ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದೆ.

೯ ರಾಜ್ಯಗಳ ಸಚಿವರೊಂದಿಗೆ ಸಭೆ
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಇನ್ನಷ್ಟು ಕಡಿಮೆ ಮಾಡುವ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು, ೯ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.
ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಸೋಂಕಿನ ಪ್ರಮಾಣ ಹೆಚ್ಚಾಗದಂತೆ, ಎಚ್ಚರ ವಹಿಸುವಂತೆ ರಾಜ್ಯಕ್ಕೆ ಸೂಚಿಸಿದ್ದಾರೆ.