
ಬೀದರ:ಸೆ.7:ಅಮೃತ ಯೋಜನೆಯಡಿ ಔರಾದ(ಬಿ) ಪಟ್ಟಣ, ಕಮಲನಗರ ಹಾಗೂ 6 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ 84.82 ಕೋಟಿಯ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಔರಾದ (ಬಿ) ಕ್ಷೇತ್ರದಲ್ಲಿ ಪ್ರತಿ ವರ್ಷ ಎದುರಾಗುವ ನೀರಿನ ಸಮಸ್ಯೆಗೆ ಶಾಶ್ವತವಾಗಿ ಕೊನೆಗಾಣಿಸಬೇಕೆಂಬ ಉದ್ದೇಶದಿಂದ ಶಾಸಕನಾಗಿ ಆಯ್ಕೆಯಾದಾಗಿನಿಂದ ನಿರಂತರ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ 200 ಕೋಟಿಗೂ ಹೆಚ್ಚು ಮೊತ್ತದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಲವು ಕಡೆಗಳಲ್ಲಿ ಕೆಲಸ ಪೂರ್ಣಗೊಂಡಿದ್ದು, ಇನ್ನೂ ಕೆಲವೆಡೆ ಪ್ರಗತಿಯಲ್ಲಿವೆ ಎಂದಿದ್ದಾರೆ.
ಹಿಂದೆ ಸಚಿವನಾಗಿದ್ದಾಗ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರ ಮೇಲೆ ಒತ್ತಡ ತಂದು ಕ್ಷೇತ್ರಕ್ಕೆ ನೀರು ಪೂರೈಸುವ 84.82 ಕೋಟಿಯ ಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದೆ. ಚುನಾವಣೆ ಕಾರಣದಿಂದ ಕೆಲಸ ವಿಳಂಬವಾಗಿತ್ತು. ಇದೀಗ ಟೆಂಡರ್ ಹಂತದಲ್ಲಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಡಿ ಔರಾದ(ಬಿ) ಪಟ್ಟಣ, ಕಮಲನಗರ ಹಾಗೂ 6 ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದ ಪೈಪ್‍ಲೈನ್ ಮೂಲಕ ನೀರು ಸರಬರಾಜು ಮಾಡುವುದರಿಂದ ಯೋಜನೆ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವರ್ಷಪೂರ್ತಿ ಕುಡಿಯುವ ನೀರು ಲಭ್ಯವಾಗಲಿದೆ. ಜನತೆಯ ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಇದೀಗ ಸನ್ನಿಹಿತವಾಗಿದೆ ಎಂದಿದ್ದಾರೆ.
ಔರಾದ(ಬಿ) ವಿಧಾನಸಭಾ ಕ್ಷೇತ್ರದ ಅನೇಕ ಹಳ್ಳಿಗಳು ನೀರಿಗಾಗಿ ಮಾಂಜ್ರಾ ನದಿಯನ್ನು ಅವಲಂಬಿಸಿದ್ದವು. ಬೇಸಿಗೆ ಕಾಲದ ಸಂದರ್ಭದಲ್ಲಿ ಈ ನದಿಯಲ್ಲಿನ ನೀರು ಬತ್ತಿ ಹೋಗುವುದರಿಂದ ನದಿ ನೀರನ್ನು ಅವಲಂಬಿಸಿದ ಹಳ್ಳಿಗಳಲ್ಲಿ ನೀರಿನ ಬವಣೆ ಉಂಟಾಗುವುದು ಸಾಮಾನ್ಯವಾಗಿತ್ತು, ನೂತನ ಯೋಜನೆಯಿಂದಾಗಿ ಔರಾದ(ಬಿ) ಪಟ್ಟಣ, ಕಮಲನಗರ ಹಾಗೂ 6 ಹಳ್ಳಿಗಳಿಗೆ ನಿರಂತರ ಕುಡಿಯುವ ನೀರು ಪೂರೈಸಲು ಸಹಕಾರಿಯಾಗಲಿದೆ ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದ್ದಾರೆ.