
ಚಿತ್ರದುರ್ಗ, ಸೆ. ೬- ರಾಜ್ಯದ ೮೩ ತಾಲ್ಲೂಕುಗಳನ್ನು ೩-೪ ದಿನಗಳಲ್ಲಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗುವುದೆಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.೨ ರಂದು ೮೩ ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಲು ಸೂಚನೆ ನೀಡಿದ್ದೇವೆ. ಅದರಂತೆ ಇನ್ನೂ ೩-೪ ದಿನಗಳಲ್ಲಿ ಸಮೀಕ್ಷೆ ವರದಿ ಬರುಲಿದ್ದು, ಕೇಂದ್ರದ ಮಾರ್ಗಸೂಚಿ ಪ್ರಕಾರ ಬರ ಘೋಷಣೆ ಮಾಡುತ್ತೇವೆ ಎಂದರು.
ಯಾವ ತಾಲ್ಲೂಕಿನಲ್ಲಿ ಬರ ಇದೆ ಅಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡುತ್ತೇವೆ. ಮೇವಿನ ಕೊರತೆ ಆಗಬಾರದು ಎಂಬ ಉದ್ದೇಶದಿಂದ ರೈತರಿಗೆ ೨೦ ಕೋಟಿ ವೆಚ್ಚದಲ್ಲಿ ಉಚಿತ ಮೇವಿನ ಬೀಜ ನೀಡುತ್ತೇವೆ ಎಂದರು.
ಬರ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ೧೫೦ ಉದ್ಯೋಗ ಖಾತ್ರಿ ಕೆಲಸ ನೀಡಲು ಚಿಂತನೆ ಮಾಡಿದ್ದೇವೆ. ಇದಕ್ಕಾಗಿ ಜಿಲ್ಲಾಧಿಕಾರಿ ಖಾತೆಗೆ ೫೨೯ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಕಳೆದ ಆ.೧೮ ರಂದು ಮಳೆ ಕೊರೆತೆ ಇರುವ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದೇವೆ. ಒಂದು ಸುತ್ತಿನ ಬೆಳೆ ಸಮೀಕ್ಷೆ ಪ್ರಕಾರ ೬೨ ತಾಲ್ಲೂಕು ಬರ ಪಟ್ಟಿಗೆ ಸೇರಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಬರ ಪಟ್ಟಿಗೆ ಆಯ್ಕೆಯಾಗಿದ್ದು, ಉಳಿದ ೫೧ ತಾಲ್ಲೂಕು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಆದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನರ ನಿರೀಕ್ಷೆಯಂತೆ ಬರ ಘೋಷಣೆ ಮಾಡಲು ಆಗುವುದಿಲ್ಲ. ಸಮರ್ಥವಾಗಿ ಜನರಿಗೆ ನ್ಯಾಯ ಕೊಡಲು ಕೇಂದ್ರ ಸರ್ಕಾರದ ಮಾನದಂಡ ಕೈ ಕಟ್ಟಿ ಹಾಕಿದಂತಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಬದಲಾವಣೆಗೆ ಮನವಿ ಮಾಡಿದ್ದೆವೆ. ಇನ್ನೊಂದು ಬಾರಿ ಮಾನದಂಡ ಬದಲಾವಣೆ ಮಾಡಿ ಎಂದು ಶೀಘ್ರದಲ್ಲೇ ಮನವಿ ಮಾಡುತ್ತೇವೆ ವಿವರಿಸಿದರು.