ಮರಾಠ ಮೀಸಲಾತಿ ಕಿಚ್ಚು:ಬಸ್‌ಗೆ ಬೆಂಕಿ: ಕರ್ಫ್ಯೂ ಜಾರಿ

ಮುಂಬೈ,ಫೆ.೨೬- ಮರಾಠ ಮೀಸಲಾತಿ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಹೋರಾಟಗಾರು ಅಂಬಾದ್ ಎಂಬಲ್ಲಿ ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ನಿಷೇಧಾಜ್ಞೆ ಹಾಗೂ ಕರ್ಫ್ಯೂ ಜಾರಿ ಮಾಡಲಾಗಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮರಾಠ ಸಮುದಾಯಕ್ಕೆ ಇತರ ಹಿಂದುಳಿದ ವರ್ಗದ ಕೋಟಾದಲ್ಲಿ ಮೀಸಲಾತಿ ನೀಡಬೇಕು ಎಂದು ಕೋರಿ ಹೋರಾಟಗಾರ ಮನೋಜ್ ಜಾರಂಗೆ ಸರ್ಕಾರದ ವಿರುದ್ಧ ಕೆಲವು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಉದ್ಯೋಗ, ಶಿಕ್ಷಣದಲ್ಲಿ ಶೇ.೧೦ ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಂಗೀಕಾರ ಪಡೆದುಕೊಂಡಿದೆ. ಆದರೆ, ಇದಕ್ಕೂ ವಿರೋಧ ವ್ಯಕ್ತವಾಗಿದೆ.
ಹೋರಾಟ ತೀವ್ರ:
ಸರ್ಕಾರ ಮರಾಠರಿಗೆ ನೀಡಿದ ಆಶ್ವಾಸನೆಯಂತೆ ನಡೆದುಕೊಂಡಿಲ್ಲ. ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲು ಹೋರಾಟಗಾರ ಮನೋಜ್ ಜಾರಂಗೆ ಕರೆ ನೀಡಿದ್ದಾರೆ. ಇದರಿಂದ ರಾಜ್ಯದ ಹಲವೆಡೆ ಮರಾಠ ಹೋರಾಟ ಮತ್ತೆ ಕಾವು ಪಡೆದುಕೊಂಡಿದೆ. ಅಂಬಾದ್‌ನಲ್ಲಿ ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಭಾರೀ ಪ್ರಮಾಣದಲ್ಲಿ ಜನರು ಸೇರಿರುವ ಕಾರಣ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬಸ್ ಸಂಚಾರ ರದ್ದು
ಪ್ರತಿಭಟನಾಕಾರರು ಸರ್ಕಾರಿ ಬಸ್‌ಗಳನ್ನು ಗುರಿಯಾಗಿಸಿಕೊಂಡ ಹಿನ್ನೆಲೆಯಲ್ಲಿ ಜಲ್ನಾ ಪ್ರದೇಶದಲ್ಲಿ ಸಂಚಾರವನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಕಾರಣ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಬಸ್ ಬಿಡುವುದನ್ನು ತಡೆ ಹಿಡಿಯಲಾಗಿದೆ. ಜೊತೆಗೆ ಅಂಬಾದ್‌ನಲ್ಲಿ ಬಸ್ ಸುಟ್ಟು ಹಾಕಿದ್ದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಎಂ ಮನೆಗೆ ಮುತ್ತಿಗೆ ಎಚ್ಚರಿಕೆ:
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮನೆಗೆ ಮುತ್ತಿಗೆ ಹಾಕಲು ಹೋರಾಟಗಾರ ಮನೋಜ್ ಜಾರಂಗೆ ಉಪವಾಸ ನಿರಶನ ಬಿಟ್ಟು ತೆರಳಿದ್ದಾರೆ. ಇದರಿಂದ ಬೀಡು – ಸೊಲ್ಲಾಪುರ- ಜಲ್ನಾ ಹೆದ್ದಾರಿ ಹಾಗೂ ಅಂಬಾದ್ ತಾಲೂಕಿನಲ್ಲಿ ಮರಾಠಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಸಾಧ್ಯತೆ ಇದೆ. ಅಂಬಾದ್ ತಾಲೂಕಿನಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಕೊಲೆ ಆರೋಪ
ಮರಾಠ ಸಮುದಾಯದ ಪರವಾಗಿ ಹೋರಾಡುತ್ತಿರುವ ನನ್ನನ್ನು ಹತ್ಯೆ ಮಾಡಲು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಚು ರೂಪಿಸಿದ್ದಾರೆ ಎಂದು ಹೋರಾಟಗಾರ ಮನೋಜ್ ಜಾರಂಗೆ ಆರೋಪಿಸಿದ್ದಾರೆ.
ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ನಡೆಸಲಾಗುತ್ತಿದೆ. ಅದನ್ನು ಹತ್ತಿಕ್ಕಲು ನನ್ನ ಹತ್ಯೆಗೂ ಸಂಚು ನಡೆದಿದೆ ಎಂದಿದ್ದಾರೆ.