82 ಲಕ್ಷ ರೂ ವಿದ್ಯುತ್ ಬಿಲ್‌ ಪಾವತಿಸಲು ಹಂಪಿ ವಿವಿಗೆ ಸೂಚನೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.04 : ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯುತ್ ಬಿಲ್‌ ಮೊತ್ತ 82.10 ಲಕ್ಷವನ್ನು ಮನ್ನಾ ಮಾಡಲಾಗದು, ಈ ಮೊತ್ತವನ್ನು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗೆ (ಜೆಸ್ಕಾಂ) ಪಾವತಿಸಬೇಕು ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ.
ಇತರ ವಿಶ್ವವಿದ್ಯಾಲಯಗಳಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಹಣಕಾಸಿನ ಆದಾಯ ಮೂಲಗಳು ಇಲ್ಲದೆ ಇರುವ ಕಾರಣ ಹಾಗೂ ಸರ್ಕಾರದಿಂದ ಅಗತ್ಯದ ಅನುದಾನ ಬಿಡುಗಡೆ ಆಗದ ಕಾರಣ ವಿದ್ಯುತ್ ಬಿಲ್‌ ಅನ್ನು ಮನ್ನಾ ಮಾಡಬೇಕು ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಜೂನ್ 15ರಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪೂರಕವಾಗಿ ಕನ್ನಡ  ಸಾಹಿತ್ಯ ಪರಿಷತ್ ಅಧ್ಯಕ್ಷರು ಸಹ ಜೂನ್‌ 19ರಂದು ಪತ್ರ ಬರೆದಿದ್ದರು. ಈ ಎರಡೂ ಪತ್ರಗಳಿಗೆ ಆಗಸ್ಟ್ 21ರಂದು ಉತ್ತರ ನೀಡಿರುವ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಪತ್ರ  ಲಭ್ಯವಾಗಿದೆ.
‘ವಿದ್ಯುತ್ ಸರಬರಾಜು ನಿಯಮಗಳನ್ವಯ ವಿದ್ಯುತ್ ಬಿಲ್ ಬಾಕಿ ಮೊತ್ತವನ್ನು ಮನ್ನಾ ಮಾಡಲು ಅವಕಾಶ ಇಲ್ಲ’ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬಾಡಿಗೆ ಕೊಡಿಸಲು ಕೋರಿ ಪತ್ರ: ಸರ್ಕಾರದ ಈ ಉತ್ತರದಿಂದ ತೀವ್ರ ಅಸಮಾಧಾನಗೊಂಡಿರುವ ಕುಲಪತಿ ಅವರು ಸೆ.2ರಂದು ಮುಖ್ಯಮಂತ್ರಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದು, ವಿಶ್ವವಿದ್ಯಾಲಯದ ಕ್ಯಾಂಪಸ್‌ನೊಳಗೆ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು 4.5 ಎಕರೆ ಜಾಗವನ್ನು ಜೆಸ್ಕಾಂಗೆ ಉಚಿತವಾಗಿ ನೀಡಲಾಗಿದ್ದು, ವಿದ್ಯುತ್ ಬಿಲ್ ಮನ್ನಾ ಮಾಡದಿದ್ದರೆ ಜೆಸ್ಕಾಂನವರು ತಾವು ಬಳಸಿಕೊಂಡಿರುವ ಜಾಗಕ್ಕೆ ಮಾಸಿಕ ಬಾಡಿಗೆ ಪಾವತಿಸಲು ಸೂಚನೆ ನೀಡಬೇಕು ಎಂದು ಕೋರಿಕೊಂಡಿದ್ದಾರೆ.
’2019ರಿಂದ 2022ರ ಸೆಪ್ಟೆಂಬರ್‌ ತಿಂಗಳರವರೆಗೆ ಇದ್ದ ಕೋವಿಡ್‌ ಸಾಂಕ್ರಾಮಿಕ ಹಾಗೂ ಸರ್ಕಾರದಿಂದ ಅನುದಾನ ಬಾರದೆ ಇರುವ ಕಾರಣ ಜೂನ್‌ ಅಂತ್ಯದವರೆಗಿನ ವಿದ್ಯುತ್ ಬಿಲ್‌ ಮೊತ್ತ : 82,10,402=00 ಆಗಿದೆ. ಸದ್ಯ ಈ ಮೊತ್ತವನ್ನು ಪಾವತಿಸುವ ಶಕ್ತಿ ವಿಶ್ವವಿದ್ಯಾಲಯಕ್ಕೆ ಇಲ್ಲ. ಸರ್ಕಾರ ವಿದ್ಯುತ್ ಬಿಲ್‌ ಮನ್ನಾ ಮಾಡಬೇಕು ಇಲ್ಲವೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಲ್‌ ವಸೂಲಿಗೆ ಜೆಸ್ಕಾಂನವರು ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಸ್ವಲ್ಪ ಸಮಯಾವಕಾಶ ಕೇಳಿದ್ದೇವೆ. ಅಷ್ಟರೊಳಗೆ ಸರ್ಕಾರ ಸ್ಪಂದಿಸುವ ವಿಶ್ವಾಸ ಇದೆ.
ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ