82 ಲಕ್ಷದತ್ತ ಸೋಂಕಿತರ ಸಂಖ್ಯೆ

ನವದೆಹಲಿ, ನ. ೧- ದೇಶಾದ್ಯಂತ ಕೊರೊನಾ ಮಹಾಮಾರಿಯ ಉಪಟಳ ಮುಂದುವರಿದಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೬ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ ೮೨ ಲಕ್ಷದತ್ತ ಸಾಗುತ್ತಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೬ ಸಾವಿರದ ೯೬೪ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಇದರೊಂದಿಗೆ ಒಟ್ಟಾರೆ ದಾಖಲಾಗಿರುವ ಸೋಂಕಿತರ ಸಂಖ್ಯೆ ೮೧ ಲಕ್ಷದ ೮೪ ಸಾವಿರದ ೮೩ ಕ್ಕೆ ಏರಿಕೆಯಾಗಿದೆ..

ಇದೇ ಅವಧಿಯಲ್ಲಿ ೪೭೦ ಸೋಂಕಿತರು ಸಾವನ್ನಪ್ಪಿದ್ದು ಇದರೊಂದಿಗೆ ಒಟ್ಟಾರೆ ಇದುವರೆಗೂ ಸಾವನ್ನಪ್ಪಿರುವ ದುರ್ದೈವಿಗಳ ಸಂಖ್ಯೆ ಒಂದು ಲಕ್ಷದ ೨೨ ಸಾವಿರದ ೧೧೧ ಕ್ಕೆ ಏರಿಕೆಯಾಗಿದ್ದು ಸಾವಿನ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿರುವುದು ಕಂಡುಬರುತ್ತಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷಕ್ಕಿಂತ ಕಡಿಮೆ ಇದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಐದು ಲಕ್ಷದ ೭೦ ಸಾವಿರದ ೪೫೮ ದಾಖಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.

ಇದುವರೆಗೂ ದೇಶದಲ್ಲಿ ಸುಮಾರು ೭೫ ಲಕ್ಷ ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ. ಸಚಿವಾಲಯದ ಮೂಲಗಳ ಪ್ರಕಾರ ಇರುವರೆಗೂ ೭೪ ಲಕ್ಷದ ೯೧ ಸಾವಿರದ ೫೧೩ ಸೋಂಕಿತರು ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. ಇದರೊಂದಿಗೆ ಗುಣಮುಖ ಪ್ರಮಾಣ ಶೇಕಡ ೯೧. ೫೪ ರಷ್ಟಿದೆ.

ಅಕ್ಟೋಬರ್ ತಿಂಗಳ ಅವಧಿಯಲ್ಲಿ ಪ್ರತಿನಿತ್ಯ ದಾಖಲಾಗುತ್ತಿದ್ದ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಒಟ್ಟಾರೆ ಹೊಸದಾಗಿ ಆಗುತ್ತಿರುವ ಇಳಿಮುಖ ಕಂಡು ಬರುತ್ತಿರುವುದು ಸ್ಪಷ್ಟವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸಾವಿನ ಪ್ರಮಾಣ ನಿನ್ನೆ ತನಕ ಶೇಕಡ ೧.೫ ಕ್ಕಿಂತ ಕಡಿಮೆ ಆಗುತ್ತಿರುವುದು ಸಚಿವಾಲಯದ ದಾಖಲೆಗಳಿಂದ ಸಾಬೀತಾಗಿದೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ದೇಶದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಯಾಗಿದ್ದು ಪ್ರತಿ ೧೦ ಲಕ್ಷ ಜನಸಂಖ್ಯೆಗೆ ೮೮ ಮಂದಿ ಸಾವನ್ನಪ್ಪಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.

೨೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು, ಐದು ರಾಜ್ಯಗಳಲ್ಲಿ ಸಾವಿನ ಪ್ರಮಾಣ ಶೇಕಡಾ ೬೫ರಷ್ಟು ದಾಖಲಾಗಿದೆ ಎಂದು ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಸೋಂಕಿನ ಜಾಡು ಪತ್ತೆ ಮಾಡುವುದು, ಸೋಂಕಿತರನ್ನು ಗುರುತಿಸುವುದು ಮತ್ತು ಅವರನ್ನು ಪರೀಕ್ಷೆಗೆ ಒಳಪಡಿಸುವುದು ಹಾಗೂ ಸೂಕ್ತ ಚಿಕಿತ್ಸೆಗೆ ದಾರಿ ಮಾಡಿಕೊಡುವ ಕೇಂದ್ರ ಸರ್ಕಾರದ ಕ್ರಿಯಾ ಯೋಜನೆಯಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ದೆಹಲಿ-ಪಂಜಾಬ್ ಮಧ್ಯಪ್ರದೇಶ ಗುಜರಾತ್ ಸೇರಿದಂತೆ ೧೦ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಶೇಕಡ ೮೫ ರಷ್ಟಿದೆ ಎದು ಆರೋಗ್ಯ ಸಚಿವಾಲಯ ಮೂಲಗಳು ತಿಳಿಸಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಕ್ಟೋಬರ್ ೩೧ರವರೆಗೆ ೧೦ ಕೋಟಿ ೯೮ ಲಕ್ಷದ ೮೭ ಸಾವಿರದ ೩೦೩ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ. ಶನಿವಾರ ಒಂದೇ ದಿನ ಸುಮಾರು ೧೧ ಲಕ್ಷ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ.