808 ನಕಲಿ ಖಾತೆ ಪಾಲಿಕೆಗೆ 20 ಕೋಟಿ ವಂಚನೆ

ಬೆಂಗಳೂರು, ಮಾ.೧೩-ಬಿಬಿಎಂಪಿಯ ರಾಜರಾಜೇಶ್ವರಿನಗರ ಉಪ ವಿಭಾಗ ಕಚೇರಿಯಲ್ಲಿ ಮಧ್ಯವರ್ತಿಗಳೇ ತಮ್ಮ ದರ್ಬಾರು ನಡೆಸಿ ದಾಖಲೆಗಳಲ್ಲಿ ತಮಗಿಷ್ಟಬಂದ ದಾಖಲೆಗಳನ್ನು ಮಾಡುವ ಅಕ್ರಮವೊಂದು ಬಯಲಿಗೆ ಎಳೆದಿರುವ ಬಿಜೆಪಿ ನಾಯಕ ಎನ್.ಆರ್.ರಮೇಶ್, ದಾಖಲೆಗಳ ಸಮೇತರ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.

ನಗರದಲ್ಲಿಂದು ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ ಅವರು, ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ೮೦೮ ನಕಲಿ ಖಾತೆಗಳನ್ನು ಮಾಡುವ ಮೂಲಕ ಪಾಲಿಕೆಗೆ ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ವಂಚಿಸಿರುವ ಬಹುಕೋಟಿ ಹಗರಣ ಸಂಬಂಧಿಸಿದಂತೆ ದಾಖಲೆ ಸಮೇತ ದೂರು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯ ವ್ಯಾಪ್ತಿಗೆ ಬರುವ ಚನ್ನಸಂದ್ರ, ಹಲಗೆವಡೇರಹಳ್ಳಿ ಮತ್ತು ಹೊಸಕೆರೆಹಳ್ಳಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಒಟ್ಟು ೮೦೮ ನಕಲಿ ಖಾತೆಗಳನ್ನು ಸೃಷ್ಟಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ವಂಚಿಸಿರುವ ಬೃಹತ್ ಹಗರಣ ನಡೆದಿದೆ ಎಂದರು.

ಕಚೇರಿಯ ಸಹಾಯಕ ಕಂದಾಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅರುಣ್ ಕುಮಾರ್, ಕಂದಾಯ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಣೇಶ್ ಮತ್ತು ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಓಂಕಾರಮೂರ್ತಿ ಎಂಬುವವರು ಸೇರಿಕೊಂಡು ವಾರ್ಡ್ ನಂಬರ್ ೧೬೦ ಕ್ಕೆ ಸಂಬಂಧಿಸಿದ ‘ಎ’ ವಹಿ ಯಲ್ಲಿ ನಕಲಿ ನಮೂದುಗಳನ್ನು ಮಾಡುವ ಮೂಲಕ ೮೦೮ ಸ್ವತ್ತುಗಳಿಗೆ ನಕಲಿ ಖಾತೆಗಳನ್ನು ಸೃಷ್ಟಿಸಿರುತ್ತಾರೆ ಎಂದು ದೂರಿದರು.

ಈ ಪೈಕಿ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಗುಮಾಸ್ತನ ಪಾತ್ರವೇ ಎಲ್ಲರಿಗಿಂತಲೂ ಬಹಳ ದೊಡ್ಡದಾಗಿದೆ.ಅಲ್ಲದೆ, ಈ ಪ್ರಕರಣದಲ್ಲಿ ‘ಎ’ ಖಾತಾಗಳನ್ನು ಮಾಡಿದ್ದೇ ಆದಲ್ಲಿ, ಅಭಿವೃದ್ಧಿ ಶುಲ್ಕದ ರೂಪದಲ್ಲಿ ಪಾಲಿಕೆಗೆ ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಸಂದಾಯವಾಗಬೇಕಿತ್ತು ಎಂದು ಹೇಳಿದರು.

ಅದರಲ್ಲೂ, ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಬಿಬಿಎಂಪಿ ಅಧಿಕಾರಿ, ನೌಕರರಿಗಿಂತಲೂ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದ್ದು, ಪಾಲಿಕೆಗೆ ಸಂಬಂಧವೇ ಇಲ್ಲದ ಯಶವಂತ್ ಕುಮಾರ್, ವಿಜಯ್ ಕುಮಾರ್ ಮತ್ತು ಮುತ್ತುರಾಜ್ ಎಂಬ ಮಧ್ಯವರ್ತಿಗಳು ಕಚೇರಿಯ ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರ ಆಸನಗಳಲ್ಲಿ ಕುಳಿತು ಪಾಲಿಕೆಯ ದಾಖಲೆಗಳಲ್ಲಿ ತಮಗಿಷ್ಟಬಂದ ನಮೂದುಗಳನ್ನು ಮಾಡುವ ಕಾನೂನು ಬಾಹಿರ ಕಾರ್ಯಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಮೂವರಿಗೆ ಓಂಕಾರಮೂರ್ತಿ ಎಂಬ ಪ್ರಥಮ ದರ್ಜೆ ಗುಮಾಸ್ತ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದು, ಇವರುಗಳು ಹೇಳಿದಂತೆ ಕಂದಾಯ ಪರಿವೀಕ್ಷಕ ಗಣೇಶ್ ಮತ್ತು ಸಹಾಯಕ ಕಂದಾಯ ಅಧಿಕಾರಿಯಾದ ಅರುಣ್ ಕುಮಾರ್ ರವರು ಚಾಚೂ ತಪ್ಪದೇ ಪಾಲಿಸುತ್ತಾ ಅವರು ಮಾಡಿಕೊಟ್ಟ ನಕಲಿ ದಾಖಲೆಗಳಿಗೆ ಕಣ್ಣು ಮುಚ್ಚಿಕೊಂಡು ಸಹಿಗಳನ್ನು ಹಾಕಿದ್ದಾರೆ ಎಂದು ಹೇಳಿದರು.

ಇವರೊಂದಿಗೆ ಈಗಾಗಲೇ ೨೦೨೨ ರಲ್ಲಿ ಕಂದಾಯ ವಸೂಲಿಗಾರರಾಗಿ ನಿವೃತ್ತರಾಗಿರುವ ಸಿದ್ದನಾಯಕ್ ಎಂಬಾತ ನಿವೃತ್ತರಾಗಿ ಒಂದೂವರೆ ವರ್ಷಗಳು ಕಳೆದರೂ ಸಹ ಪ್ರತಿನಿತ್ಯ ಕಚೇರಿಗೆ ಹಾಜರಾಗಿ ಕಚೇರಿಯ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಮತ್ತು ನಮೂದುಗಳನ್ನು ಮಾಡುವ ಕೆಲಸವನ್ನು ಮಾಡಿದ್ದಾರೆ.

ಅದರಲ್ಲೂ, ಮೂರ್ತಿ ಅಲಿಯಾಸ್ ಕೆಂಚೇನಹಳ್ಳಿ ಮೂರ್ತಿ ಎಂಬ ಮತ್ತೊಬ್ಬ ವಂಚಕ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಸದರಿ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಕಾರ್ಯವನ್ನು ಮಾಡುತ್ತಾ ಹತ್ತಾರು ಕೋಟಿ ರೂಪಾಯಿಗಳ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾಡಿರುತ್ತಾನೆ ಎಂದು ಆಪಾದಿಸಿದರು.

ಈ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರ ಆಪ್ತ ಸಹಾಯಕನಾಗಿರುವ ಗುರುಶಾಂತಪ್ಪ ಎಂಬ ಮತ್ತೊಬ್ಬ ವಂಚಕ ಎಲ್ಲ ರೀತಿಯ ಸಹಾಯ ಮಾಡಿದ್ದು, ಈ ವಲಯದ ಉಪ ಆಯುಕ್ತ ಅಬ್ದುಲ್ ರಬ್ ಈ ಎಲ್ಲಾ ವಂಚಕ ಅಧಿಕಾರಿಗಳು, ನೌಕರರು ಮತ್ತು ಮಧ್ಯವರ್ತಿಗಳ ಕಾನೂನು ಬಾಹಿರ ಕಾರ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಬೃಹತ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಮೇಲೆ ತಿಳಿಸಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜತೆಗೆ, ಈ ದಾಖಲೆಗಳೊಂದಿಗೆ ಲಗತ್ತಿಸಿರುವ ಎಲ್ಲ ೮೦೮ ಸ್ವತ್ತುಗಳಿಗೆ ಸಂಬಂಧಿಸಿದ ನಕಲಿ ‘ಎ’ ಖಾತಾಗಳನ್ನು ಕೂಡಲೇ ರದ್ದುಗೊಳಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರಮೇಶ್ ಒತ್ತಾಯಿಸಿದರು.