8.9 ಶತಕೋಟಿ ಡಾಲರ್ ಪಾವತಿಗೆ ಜಾನ್ಸನ್ ಕಂಪನಿ ಒಪ್ಪಿಗೆ

Johnson

ನವದೆಹಲಿ, ಏ.೫- ಮಕ್ಕಳ ಸಾಬೂನು ಸೇರಿದಂತೆ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಟಾಲ್ಕಮ್ ಪೌಡರ್ ಕ್ಯಾನ್ಸರ್‌ಗೆ ಕಾರಣವೆಂದು ಆರೋಪಿಸಿರುವ ಸಾವಿರಾರು ಸಂತ್ರಸ್ತರಿಗೆ ೮.೯ ಶತಕೋಟಿ ಡಾಲರ್ ಪರಿಹಾರ ಪಾವತಿಸಲು ಕಂಪನಿ ಒಪ್ಪಿಕೊಂಡಿದೆ.
ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಟಾಲ್ಕ್ ಉತ್ಪನ್ನಗಳನ್ನು ಬಳಸುವುದರಿಂದ ತಾವು ಅಂಡಾಶಯದ ಕ್ಯಾನ್ಸರ್ ಪೀಡಿತರಾಗಿದ್ದೇವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ಮಹಿಳೆಯ ಪರವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಈ ತೀರ್ಪನ್ನು ಪರಿಶೀಲಿಸಬೇಕು ಅಥವಾ ರದ್ದು ಪಡಿಸಬೇಕು ಎಂದು ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ಅಮೆರಿಕ ಸುಪ್ರೀಂ ಕೋರ್ಟ್‌ಗೆ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಪ್ರಾರಂಭದಲ್ಲಿ ಈ ಪ್ರಕರಣವನ್ನು ಮಿಸ್ಸೌರಿಯ ರಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಸ್ಸೌರಿ ನ್ಯಾಯಾಲಯವು ಅಂಡಾಶಯ ಕ್ಯಾನ್ಸರ್‌ಗೆ ತುತ್ತಾದ ೨೨ ಮಹಿಳೆಯರಿಗೆ ಕಂಪನಿ ೭೪.೭ ಬಿಲಿಯನ್ ಡಾಲರ್ ಮೊತ್ತದ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿತ್ತು.
ಈ ವಿಚಾರಣೆಯು ನ್ಯಾಯಯುತವಾಗಿ ನಡೆಯಲಿಲ್ಲ, ತೀರ್ಪು ಸರಿ ಇಲ್ಲ ಎಂದು ಕಂಪನಿಯು ವಾದಿಸಿತ್ತು. ಈ ಟಾಲ್ಕ್ ಬಳಕೆಯಿಂದ ಆಗುವ ಹಾನಿಯ ಕುರಿತು ಕಂಪನಿಗೆ ತಿಳಿದಿದ್ದರೂ ಕೂಡ ಕಂಪನಿ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಉತ್ಪನ್ನಗಳ ಸುರಕ್ಷತೆಯನ್ನು ದಶಕಗಳಿಂದ ತಪ್ಪಾಗಿ ನಿರೂಪಿಸಲಾಗಿದೆ ಎಂದು ಬರ್ಲಿಸನ್ ತಮ್ಮ ತೀರ್ಪಿನಲ್ಲಿ ಬರೆದಿದ್ದರು.
ಸಂಸ್ಥೆ ತಪ್ಪನ್ನು ಒಪ್ಪಿಕೊಂಡಿಲ್ಲ. ಆದರೆ ಮೇ ೨೦೨೦ ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಅದರ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಿದೆ. ಸಂತ್ರಸ್ತರಿಗೆ ೮.೯ ಬಿಲಿಯನ್ ಡಾಲರ್ ಪರಿಹಾರ ನೀಡುವುದಾಗಿ ಘೋಷಿಸಿದೆ.