8 ಸಾವಿರ ಜನರಿಂದ ಏಕಕಾಲಕ್ಕೆ ಯೋಗಾಭ್ಯಾಸ ಪ್ರದರ್ಶನ

ಚಿತ್ರದುರ್ಗ ಜ. 16; ಐತಿಹಾಸಿಕ ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರಿಂದ ಏಕಕಾಲಕ್ಕೆ “ಯೋಗಥಾನ್” ಯೋಗ ಪ್ರದರ್ಶನ ಅದ್ದೂರಿಯಾಗಿ ನೆರವೇರಿತು.
ಚಿತ್ರದುರ್ಗ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯುಷ್ ಇಲಾಖೆ ಸೇರಿದಂತೆ ಜಿಲ್ಲಾ ಯೋಗ ಸಂಸ್ಥೆಗಳ ಸಹಯೋಗದಲ್ಲಿ “ಯೋಗಥಾನ್” ಗಿನ್ನೆಸ್ ವಿಶ್ವದಾಖಲೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಯುವಕರು, ಯುವತಿಯರು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು ಸೇರಿ ಗಿನ್ನೇಸ್ ವಿಶ್ವ ದಾಖಲೆ ಮಾಡುವ ನಿಟ್ಟಿನಲ್ಲಿ “ಯೋಗಥಾನ್” ಯೋಗ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, 8 ಸಾವಿರ ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ನೀಡಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.ಯೋಗ” ಎಂಬುವುದು ಕೇವಲ ಆಸನ ಮಾತ್ರವಲ್ಲದೇ ದೇಹ ಹಾಗೂ ಮನಸ್ಸು, ಆತ್ಮ ಈ ಮೂರನ್ನು ಒಟ್ಟಾಗಿ ಹಿಡಿದಿಡುತ್ತದೆ. ದೇಹ, ಮನಸ್ಸು ಹಾಗೂ ಆತ್ಮ ಒಟ್ಟಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಶಾಂತಿ, ಸಹಬಾಳ್ವೆಯ ವಿಶ್ವ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.