8 ವರ್ಷಗಳಲ್ಲಿ ಒಂದು ಲಕ್ಷ ಅಂಗವಿಕಲರಿಗೆ ಅನುಕೂಲ: ಕೇಂದ್ರ ಸಚಿವ ಖೂಬಾ600 ಅಂಗವಿಕಲರಿಗೆ ಸಲಕರಣೆ ವಿತರಣೆ

ಬೀದರ್:ಸೆ.18: ಇಲ್ಲಿಯ ಶಹಾಪುರ ಗೇಟ್ ಸಮೀಪ ಇರುವ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲೆಯ 600 ಅಂಗವಿಕಲರಿಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧೀನದ ಪಂಡಿತ ದೀನ ದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ಸಿಕಂದರಾಬಾದ್‍ನ ದಕ್ಷಿಣ ಪ್ರಾದೇಶಿಕ ಕೇಂದ್ರದ ವತಿಯಿಂದ ಸಾಧನ, ಸಲಕರಣೆಗಳನ್ನು ವಿತರಿಸಲಾಯಿತು.

ಶಾಹೀನ್‍ನಲ್ಲಿ ಸೆಪ್ಟೆಂಬರ್‍ನಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಮೌಲ್ಯಮಾಪನ ಮಾಡಲಾದ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, ಮಡಚುವ ಗಾಲಿ ಕುರ್ಚಿ, ಸಹಾಯಕ ಊರುಗೋಲು, ಮೊಣಕೈ ಊರುಗೋಲು, ಊರುಗೋಲು (ದೊಡ್ಡ ಬಗೆಯ), ಮಡಚುವ ವಾಕರ್, ರೊಲೇಟರ್ (ಬಿ), ಸಿ.ಪಿ. ಕುರ್ಚಿ, ಎಂ.ಆರ್. ಕಿಟ್, ಸ್ಮಾರ್ಟ್ ಕೇನ್ (ದೃಷ್ಟಿಹೀನ), ಎಡಿಎಲ್ ಕಿಟ್ ಹಾಗೂ ಕುಷ್ಠರೋಗ ಬಾಧಿತರಿಗೆ ಕೃತಕ ಅಂಗ ಮತ್ತು ಕ್ಯಾಲಿಪರ್ ಸೇರಿ 12 ಬಗೆಯ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು, ಅಂಗವಿಕಲರು ಸಾಧನ, ಸಲಕರಣೆಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ಮೇಲೆ 2014 ರಿಂದ ಈವರೆಗೆ ಒಂದು ಲಕ್ಷ ಅಂಗವಿಕಲರಿಗೆ ಉಚಿತ ಸಾಧನ, ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಶಾಹೀನ್ ಕಾಲೇಜಿನಲ್ಲಿ 2008 ರಲ್ಲಿ ನಡೆದಿದ್ದ ಶಿಬಿರದ ಪ್ರಯೋಜನ 900 ಅಂಗವಿಕಲರು ಪಡೆದಿದ್ದರು. ಈ ಬಾರಿ 600 ಜನ ಲಾಭ ಪಡೆದಿದ್ದಾರೆ. ಅಂಗವಿಕಲರಿಗೆ ಸಲಕರಣೆ ವಿತರಣೆ ಸೇರಿದಂತೆ ಸರ್ಕಾರದ ಜನ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.

ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರೌಫೊದ್ದಿನ್ ಕಚೇರಿವಾಲೆ, ಪಂಡಿತ ದೀನ ದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ಸಿಕಂದರಾಬಾದ್‍ನ ದಕ್ಷಿಣ ಪ್ರಾದೇಶಿಕ ಕೇಂದ್ರದ ತಪಸ್ ಬೆಹರ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಇದ್ದರು.