8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ: ಉದ್ರಿಕ್ತರಿಂದ ಠಾಣೆಗೆ ಮುತ್ತಿಗೆ

ಕಲಬುರಗಿ:ಫೆ.26: ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಸ್ವಗ್ರಾಮ ಸೇಡಂ ತಾಲ್ಲೂಕಿನ ಊಡಗಿಯಲ್ಲಿ ಕಳೆದ ಭಾನುವಾರ ರಾತ್ರಿ 9 ಗಂಟೆಗೆ ಸುಮಾರು 8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಒಂದು ಕೋಮಿನ ಜನರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರಾತ್ರಿ ಹತ್ತು ಗಂಟೆಗೆ ಪೋಲಿಸ್ ಠಾಣೆಯ ಮುಖ್ಯ ರಸ್ತೆ ತಡೆದು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರು ಹೋರಾಟ ಆರಂಭಿಸಿದರು. ಹಲ್ಲೆ ಮಾಡಿದವರಿಗೆ ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಬೇಕೇ, ಬೇಕು ನ್ಯಾಯ ಬೇಕು ಎಂಬ ಘೋಷಣೆಗಳನ್ನು ಹಾಕಿದರು.
ಮಲ್ಲಿಕಾರ್ಜುನ್ ಮತ್ತು ಅವರ ಸಹಚರರು ಹತ್ತರಿಂದ 15 ಜನ ಯುವಕರು ಸೇರಿ ಜವರ್ ಪಟೇಲ್(48), ಸೈಯದ್ ಹಮೀದ್(54), ಸೈಯದ್ ಮೋಸಿನ್(25), ರಸ್ತಾಗಿರ(22), ಚಾಂದ್ ಪಾಶಾ (25), ಸದ್ದಾಂ ಸೇರಿದಂತೆ ಒಟ್ಟು 8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಕಳೆದ 23ರಂದು ಮಧ್ಯರಾತ್ರಿಯಲ್ಲಿ ಊಡಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ನಂಬರ್‍ನಲ್ಲಿ ನಿಲ್ಲಿಸಿದ್ದ 4ರಿಂದ ಐದು ಆಟೋಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ಆಟೋ ಗ್ಲಾಸ್ ಹಾಗೂ ಟಾಪ್ ಜಖಂಗೊಳಿಸಿ ಹಾಳು ಮಾಡಿದ್ದರು. ಆ ಕುರಿತು ಮರುದಿನ 24ರಂದು ಪೋಲಿಸ್ ಠಾಣೆಗೆ ಸೈಯದ್ ಹಮೀದ್ ಮತ್ತು ಗುಲಾಮಸಾಬ್ ಅವರಿಬ್ಬರೂ ದೂರು ಸಲ್ಲಿಸಿದ್ದರು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಹಲ್ಲೆಯಿಂದಾಗಿ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜವರ್ ಪಟೇಲ್ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಜಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರವಾನಿಸಿ ತುರ್ತು ಹವಾನಿಯಂತ್ರಿತ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಗ್ರಾಮದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿದೆ. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೇಂದ್ರ. ಹೆಚ್ಚುವರಿ ವರಿಷ್ಠಾಧಿಕಾರಿ ಶ್ರೀನಿಧಿ, ಸಿಪಿಐ ಸಂಗಮನಾಥ್ ಹಿರೇಮಠ್, ಶಹಾಬಾದ್ ಸಿಪಿಐ ಶಂಕರಗೌಡ, ಮಂಜುನಾಥ್, ಸಿಪಿಐ ತಿರುಮೇಶ್ ಮುಂತಾದವರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.