8ನೇ ಗಂಗಾವತಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.06: ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ಮೆರವಣಿಗೆ, ಸ್ತಬ್ಧ ಚಿತ್ರಗಳ ಪ್ರದರ್ಶನ, ಸ್ಕೌಟ್ ಅಂಡ್ ಗೈಡ್ಸ್ ಜಾಥಾ, ವೈವಿಧ್ಯಮಯ ತಂಡಗಳು  ಸ್ತಬ್ಧಚಿತ್ರ, ವಿವಿಧ ಕಲಾವಿಧರೊಂದಿಗೆ 8ನೇ ಗಂಗಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ  ಸರ್ವಾಧ್ಯಕ್ಷರಾದ ಸಿ.ಎಚ್ ನಾರಿನಾಳ ಅವರ ಭವ್ಯ ಮೆರವಣಿಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಬೆಳಿಗ್ಗೆ ವೇದಿಕೆ ಮುಂಭಾಗದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ರಾಷ್ಟ್ರ ಧ್ವಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶರಣೆಗೌಡ ಮಾಲಿಪಾಟೀಲ್ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಧ್ವಜ, ತಾಲೂಕ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಅಂಗಡಿ ಅವರು ಕನ್ನಡ ಧ್ಜಜ ವನ್ನು ಕ್ರಮವಾಗಿ ಧ್ವಜಾರೋಹಣ ಮಾಡಿ ರಾಷ್ಟಗೀತೆ ಹಾಗೂ ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.
ನಗರದ ಎಪಿಎಂಸಿ ಶ್ರೀ ಚನ್ನಬಸವೇಶ್ವರರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ನಗರದ ಸಿಬಿಎಸ್ ವೃತ್ತದ ಮಾರ್ಗವಾಗಿ ಮಹಾವೀರ ವೃತ್ತ, ಬಸವಣ್ಣ ಸರ್ಕಲ್, ಪಂಪಾನಗರ, ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ಜ್ಯೂನಿಯರ್ ಕಾಲೇಜ್ ಮೈದಾನದವರೆಗೆ ನಡೆಯಿತು.
ಸಮ್ಮೇಳನ ಹಿನ್ನಲೆ ನಗರದ ಸಿಬಿಎಸ್ ವೃತ್ತದಿಂದ ಗಾಂಧಿವೃತ್ತದವರೆಗೂ, ಸಿಬಿಎಸ್ ವೃತ್ತದಿಂದ ವಿಶಾಲ ಮಾರ್ಟ್ ವರಿಗೂ ಹಾಗೂ ಸಿಬಿಎಸ್ ವೃತ್ತದಿಂದ ಮಹಾರಾಣಾ ಪ್ರತಾಪ್ ಸಿಂಗ್ ವೃತ್ತದವರೆಗೂ ಮತ್ತು ದುರ್ಗಮ್ಮ ದೇವಸ್ಥಾನದಿಂದ ಇಂದಿರಾವೃತ್ತದವರೆಗೂ ಕನ್ನಡ ಬಾವುಟ ಸಾಂಕೇತಿಕ ಬಣ್ಣದ ಹಾಳೆಗಳನ್ನು ಕಟ್ಟಿ ನಗರದಲ್ಲಿ ಅಲಂಕಾರ ಮಾಡಲಾಗಿತ್ತು. ಈ ವೇಳೆ ಶಾಸಕ ಬಸವರಾಜ ಧಡೇಸೂಗುರು, ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ್, ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ,ನೆಕ್ಕಂಟಿ ಸೂರಿಬಾಬು, ಮಹೇಶ ಸಿಂಗನಾಳ, ಉಮೇಶ ಸಿಂಗನಾಳ, ರಘುನಾಥ ಪವಾರ, ಪಂಪಣ್ಣ ನಾಯಕ ಸೇರಿದಂತೆ ನೂರಾರು ಕಸಪಾ ಪದಾಧಿಕಾರಿಗಳು ಇದ್ದರು.