ಸರ್ಕಾರಿ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹ

ಸಂಜೆವಾಣಿ ವಾರ್ತೆ

ದಾವಣಗೆರೆ.೧:  ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು, ವಿದ್ಯಾ‌ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಈ ಬಗ್ಗೆ ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಗಮನಿಸಿ ಸಮಸ್ಯೆಗಳನ್ನು ನಿವಾರಣೆ ಮಾಡಿ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾದ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಅಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,‌ ಸರ್ಕಾರಿ ಶಾಲೆಗಳೊಗೆ ಬೇಕಾದ ಮೂಲಭೂತ ಸೌಲಭ್ಯಗಳಾದ ಉತ್ತಮ ಕಟ್ಟಡ, ಕೊಠಡಿ, ಶೌಚಾಲಯ, ಆಟದ ಮೈದಾನ, ಲ್ಯಾಬೋರೇಟರಿ, ಲೈಬ್ರರಿ, ಶಿಕ್ಷಕರು, ವಿದ್ಯುಚ್ಚಕ್ತಿ, ನೀರು‌ ಸೇರಿದಂತೆ‌ ಸರ್ಕಾರಿ ವಿದ್ಯಾ ಸಂಸ್ಥೆಗಳಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಹೋಲಿಕೆಯಾಗುವ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಬಡಬಗ್ಗರ ಮಕ್ಕಳು, ದೀನ ದಲಿತರ ಮಕ್ಕಳು, ಹಿಂದುಳಿದವರ ಮಕ್ಕಳು, ಜನ ಸಾಮಾನ್ಯರ ಮಕ್ಕಳು, ಅಲ್ಪ ಸಂಖ್ಯಾತರ ಮಕ್ಕಳು, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳು, ಎಲ್ಲಾ ಜಾತಿಯಿಂದ ಬಂದ ಜನರ ಮಕ್ಕಳು ತಮ್ಮ ಮುಂದಿನ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಳು ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕೆಂದರು.ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 693 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 702 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳು, 99 ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳು ಹಾಗೂ ಇತರೆ ವಿದ್ಯಾ ಸಂಸ್ಥೆಗಳು ಇದ್ದು, ಅವುಗಳಲ್ಲಿ ಕೆಲವು ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದೆ. ಇನ್ನೂ ಕೆಲವಡೆ ಕೊಠಡಿಗಳು ಇದ್ದರೂ ಮೇಲ್ಛಾವಣಿ ‌ಸರಿಇಲ್ಲದೇ ಸೋರುತ್ತಿವೆ. ಕೆಲವೆಡೆ ಮರದ ಕೆಳಗೆ ಶಾಲಾ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಮನವಿ ಮಾಡಿದರು.ಇದೇ ರೀತಿ ಜಿಲ್ಲೆಯಲ್ಲಿರುವ ಇರುವ ಸರ್ಕಾರಿ ಆಸ್ಪತ್ರೆಗಳಲ್ಲೂ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಈ ಬಗ್ಗೆಯೂ ಸರ್ಕಾರ, ಸಂಬಂದಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ‌ ಗಣೇಶ್ ಕೆ.ದುರ್ಗದ, ಜಿ.ಹೆಚ್.ಬಸವರಾಜ್, ಮಹಮ್ಮದ್ ಯೂಸುಫ್, ಬಿ.ಮಲ್ಲೇಶ್ ಇದ್ದರು.