77ನೇ ಸ್ವಾತಂತ್ರ ದಿನಾಚರಣೆಗೆ ಮೆರಗು ನೀಡಿದ ವಿದ್ಯಾರ್ಥಿಗಳ ದೇಶಾಭಿಮಾನ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಆ.16. ನಿನ್ನೆ ನಡೆದ 77ನೇ ಸ್ವಾತಂತ್ರ ದಿನಾಚರಣೆಯಲ್ಲಿ ಯುವಕರ, ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಜೋರಾಗಿತ್ತು. ಎಲ್ಲರಲ್ಲೂ ಸಂಬ್ರಮಾಚರಣೆ ಮನೆಮಾಡಿ ಕೈಗಳ ಮೇಲೆ ಟ್ಯಾಟುಗಳು, ಅಂಗಿಯ ಮೇಲೆ ತ್ರಿವರ್ಣಧ್ವಜದ ಸ್ಟಿಕ್ಕರ್, ಬೈಕ್‍ಗಳಿಗೆ ಪುಟ್ಟ ಝಾಂಡಾ, ಹೀಗೆ ತಮ್ಮ ತಮ್ಮ ದೇಶಾಭಿಮಾನ ತೋರಿಸಿಕೊಂಡು ಸ್ವತಂತ್ರ ದಿನಾಚರಣೆ ಆಚರಿಸಿದರು. ವಿದ್ಯಾರ್ಥಿಗಳಂತೂ ಅಗಸ್ಟ್ 15ರ ಹಿಂದಿನ ದಿನವಿಡೀ ತಮ್ಮ ಶಾಲೆಯ ಧ್ವಜದ ಕಟ್ಟೆಯ ಸುತ್ತಲೂ ಸಗಣಿಯಿಂದ, ಬಣ್ಣದಿಂದ ಸಾರಿಸಿ ರಂಗೋಲಿಯಲ್ಲಿ ಭಾರತ ನಕ್ಷೆ ಬಿಡಿಸಿ ಶುಭಾಶಯಗಳನ್ನು ತಿಳಿಸಿರುವುದು. ಸ್ವತಂತ್ರ ಗಳಿಕೆಗಾಗಿ ನಡೆಸಿದ ಹೋರಾಟದ ಮಜಲುಗಳ ಪೈಕಿ ಒಂದಾದ ಉಪ್ಪಿನ ಸತ್ಯಾಗ್ರಹದ ಕುರುಹಾಗಿ ಭಾರತ ನಕ್ಷೆಯಲ್ಲಿ ಉಪ್ಪಿನಿಂದ ತುಂಬಿ ತ್ರಿವರ್ಣ ಬಣ್ಣಗಳನ್ನು ಹಾಕುವುದು, ಹೋರಾಟಗಾರರ ಹೆಸರುಗಳನ್ನು ಹಾಕಿರುವುದು ಕಂಡುಬಂತು.
ಸಸ್ಯ ಶ್ಯಾಮಲ ಭಾರತ:- ದೇಶಾಭಿಮಾನ ವ್ಯಕ್ತಪಡಿಸುವ ವಂದೇ ಮಾತರಂ ದೇಶಭಕ್ತಿಯ ಹಾಡಿನಲ್ಲಿ ಬರುವ ಒಂದು ಸಾಲಿನ ಭಾಗವಾಗಿ ಎನ್ನುವಂತೆ ಸ್ಥಳೀಯ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಸತತ 10 ದಿನಗಳ ಜವಾಬ್ಧಾರಿಯಿಂದ ತಮ್ಮ ಶಾಲೆಯ ಅಂಗಳದಲ್ಲಿ ಭಾರತ ನಕ್ಷೆಯಲ್ಲಿ ಸಜ್ಜೆಯನ್ನು ಬಿತ್ತನೆ ಮಾಡಿದ್ದರು. ಇದು ಆಗಸ್ಟ್-15 ರಂದು ಸ್ವತಂತ್ರ ದಿನಾಚರಣೆಯ ದಿನಕ್ಕೆ ಹುಲುಸಾಗಿ ಬೆಳೆದು ಸಸ್ಯ ಶಾಮಲ ಭಾರತದ ನಕ್ಷೆಯು ಸ್ವತಂತ್ರ ದಿನಾಚರಣೆ ಹಬ್ಬಕ್ಕೆ ವಿದ್ಯಾರ್ಥಿಗಳಲ್ಲಿ ಮನೋಲ್ಲಾಸ ನೀಡಿತ್ತು. ಧ್ವಜಾರೋಹಣಕ್ಕೆ ಬಂದ ಅತಿಥಿಗಳು ವಿದ್ಯಾರ್ಥಿಗಳ ಈ ಜವಬ್ದಾರಿಯನ್ನು, ದೇಶಾಭಿಮಾನವನ್ನು ಮೆಚ್ಚಿ ಪ್ರಸಂಶೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಈ ಹುರುಪಿಗೆ ತರಗತಿ ಶಿಕ್ಷಕರೂ ಪ್ರೋತ್ಸಾಹ ನೀಡಿದ್ದರು. ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ವಿಭಿನ್ನವಾಗಿ ಭಾಷಣಗಳನ್ನು ಮಾಡಿ ಅತಿಥಿಗಳಿಂದ ಶಭಾಷ್ ಎನಿಸಿಕೊಂಡರು.