76 ಸಾವಿರ ಮತಗಳಿಂದ ಲಕ್ಷ್ಮಣ ಸವದಿ ಐತಿಹಾಸಿಕ ಗೆಲುವು, ರಮೇಶ ಜಾರಕಿಹೊಳಿಗೆ ತೀವ್ರ ಮುಖಭಂಗ20 ವರ್ಷಗಳ ನಂತರ ಕಾಂಗ್ರೆಸ್ ಗೆಲುವು ಭಾವೈಕ್ಯತೆಯ ಸಂಭ್ರಮಾಚರಣೆ

(ಅಬ್ದುಲಜಬ್ಬಾರ ಚಿಂಚಲಿ)
ಅಥಣಿ : ಮೇ.14:ರಾಜ್ಯದಲ್ಲಿ ಕುತೂಹಲ ಮೂಡಿಸಿದ ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ 76122 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರನ್ನು ಸೋಲಿಸುವ ಮೂಲಕ ಅಥಣಿಯ ಧರ್ಮ ಯುದ್ಧದಲ್ಲಿ ದಿಗ್ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 20 ವರ್ಷಗಳ ನಂತರ ಅಥಣಿಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಕಾಂಗ್ರೆಸ್ ಮುಖಂಡರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಾಗಿದ್ದು, ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೇಸ್ ಸೇರಿದ್ದ ಲಕ್ಷ್ಮಣ ಸವದಿ ಅವರನ್ನು ಸೋಲಿಸಲು ಪಣತೊಟ್ಟಿದ್ದ ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿ ಅವರಿಗೆ ತೀವ್ರ ಮುಖಭಂಗವಾಗಿದೆ.
ಕಳೆದ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅತ್ಯಧಿಕ ಶೇ.84ರಷ್ಟು ಮತದಾನವಾಗಿತ್ತು. ಮೇಲ್ನೋಟಕ್ಕೆ ಲಕ್ಷ್ಮಣ ಸವದಿ ಗೆಲ್ಲುತ್ತಾರೆ ಎಂಬ ಆತ್ಮವಿಶ್ವಾಸ ಎಲ್ಲರಲ್ಲಿ ಇತ್ತು ಆದರೆ ಇಂದಿನ ಫಲಿತಾಂಶಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಲಕ್ಷ್ಮಣ ಸವದಿಯವರ ಮನೆಯ ಮುಂಭಾಗದಲ್ಲಿ ಪೆಂಡಾಲ್ ಹಾಕಿ ಬೃಹತ್ ಎ???ಡಿ ಟಿವಿ ಅಳವಡಿಸುವ ಮೂಲಕ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಗ್ಗೆ 9:00 ಒಳಗಾಗಿ ಬಂದ ಫಲಿತಾಂಶದಲ್ಲಿ ಲಕ್ಷ್ಮಣ ಸವದಿ ಮುನ್ನಡೆ ಕಾಯ್ದುಕೊಂಡ ಸುದ್ದಿ ತಿಳಿದು ಖುಷಿಪಟ್ಟರು. 10:00 ಗಂಟೆಯ ನಂತರ ಬಂದ ಸುದ್ದಿಯಲ್ಲಿ ಲಕ್ಷ್ಮಣ ಸವದಿ 35,ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿರುವುದನ್ನು ಕಂಡು ಕಾರ್ಯಕರ್ತರು ಉತ್ಸಾಹದಿಂದ ಪರಸ್ಪರ ಗುಲಾಲು ಎರಚಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೊನೆಗಳಿಗೆ ಬಂದ ಫಲಿತಾಂಶದಲ್ಲಿ ಲಕ್ಷ್ಮಣ ಸವದಿ ಅವರಿಗೆ ಒಟ್ಟು 1,31,404 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಹೇಶ್ ಕುಮಟಳ್ಳಿ ಅವರಿಗೆ 55282 ಮತಗಳನ್ನು ಪ್ರಭಾವಗೊಂಡರು. ಲಕ್ಷ್ಮಣ ಸವದಿ ಅವರ ಗೆಲುವು ಘೋಷಣೆಯಾಗುತ್ತಿದ್ದಂತೆ ಅಥಣಿ ಪಟ್ಟಣ ಸೇರಿದಂತೆ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಲಕ್ಷ್ಮಣ ಸವದಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಅಥಣಿ ಪಟ್ಟಣದಲ್ಲಿ ವಿವಿಧ ಸಮುದಾಯದ ಯುವಕ ತೊಂಡೊಪತಂಡವಾಗಿ ಲಕ್ಷ್ಮಣ ಸವದಿ ಅವರ ಮನೆಗೆ ಆಗಮಿಸಿ ಘೋಷಣೆಗಳನ್ನು ಕೂಗುತ್ತಾ ಪರಸ್ಪರ ಗುಲಾಲು ಎರಚಿಕೊಂಡು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿವಿಧ ವಾದ್ಯಮೇಳ ಮತ್ತು ಧ್ವನಿವರ್ಧಕ ಬಳಸಿ ಕಾಂಗ್ರೆಸ್ ಪಕ್ಷದ ಬಾವುಟ ಸೇರಿದಂತೆ ವಿವಿಧ ಸಮುದಾಯಗಳ ಬಾವುಟಗಳ ಹಿಡಿದು, ವಿವಿಧ ಬಣ್ಣಗಳನ್ನು ಪರಸ್ಪರ ಎರೆಚಿಕೊಂಡು ನೂರಾರು ಯುವಕರು ಭಾವೈಕ್ಯತೆಯಿಂದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಂತರ ಲಕ್ಷ್ಮಣ ಸವದಿ ಅವರ ಸುಪುತ್ರ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಅಥಣಿ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ವಿಜಯೋತ್ಸವವನ್ನು ಆಚರಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಗಂಡಸ್ತನ ಇದ್ದರೆ ಗೆದ್ದು ಬಾ ಎಂದಿದ್ದ ಜಾರಕಿಹೊಳಿಗೆ ತೀವ್ರ ಮುಖಭಂಗ
ಅಥಣಿ ಮತ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಮಹೇಶ್ ಕುಮಟಳ್ಳಿ ಅವರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಲಕ್ಷ್ಮಣ ಸವದಿ ಅವರ ವಿರುದ್ಧ ಭಾಷಣಗಳಲ್ಲಿ ಪೀಡೆ ತೊಲಗಿತು, ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡುತ್ತೇವೆ ನಿರ್ದೇಶಕ ಸ್ಥಾನದಿಂದ ಕಿತ್ತು ಹಾಕುತ್ತೇವೆ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರ ಸಿಬಿಐ ತನಿಖೆ ಮಾಡಿಸುತ್ತೇವೆ, ಸವದಿಯಂತಹ ಸೊಕ್ಕಿನ ಮನುಷ್ಯನನ್ನು ಸೋಲಿಸಿ ಮತ್ತೆ ಕಬ್ಬು ಕಟಾವಿಗೆ ಕಳಿಸುತ್ತೇವೆ, ಈ ಚುನಾವಣೆಯಲ್ಲಿ ಸೋಲಿಸಿ ಹೆಣಾ ಕೆಡುತ್ತೇವೆ ಎಂಬ ಕಟುವಾದ ಮಾತುಗಳನ್ನು ಆಡಿದ್ದ ಜಾರಕಿಹೊಳಿ ತಮ್ಮ ಆಪ್ತ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸುವಲ್ಲಿ ವಿಫಲರಾಗಿ ತೀವ್ರ ಮುಖಭಂಗ ಎದುರಿಸುವಂತಾಗಿದೆ.
ಸವದಿ ಅವರಿಗೆ ಸ್ವಾಭಿಮಾನದ ಮೇಲುಗೈ :
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿದ್ದು, ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆಗುವ ಮೂಲಕ ಅಥಣಿ ಮತಕ್ಷೇತ್ರದಲ್ಲಿ ಅನುಕಂಪದ ಅಲೆ ಮತ್ತು ಸ್ವಾಭಿಮಾನದ ತಂತ್ರವನ್ನು ಬಳಸಿ ಮತದಾರರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪಂಚಮಸಾಲಿ ಸಮುದಾಯದ ನಾಯಕನಾಗಿದ್ದು, ಇಲ್ಲಿ ನಿರ್ಣಾಯಕ ಮತಗಳು ಲಿಂಗಾಯತ ಸಮುದಾಯದ ಮತಗಳ ಆಗಿರುವುದರಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಅಥಣಿ ಮತಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಮಾಡಿದ್ದರು. ಇದಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಕೂಡ ಬಿಜೆಪಿ ಅಭ್ಯರ್ಥಿ ಪರವಾಗಿ ತಂತ್ರ ರೂಪಿಸಿದರು. ಆದರೆ ಇದು ಯಾವುದು ಇಲ್ಲಿ ಫಲ ನೀಡಲಿಲ್ಲ. ಅಥಣಿ ಮತಕ್ಷೇತ್ರದಲ್ಲಿ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿರುವ ವಿಚಾರವೇನೆಂದರೆ ಶಾಸಕ ಮಹೇಶ್ ಕುಮಟಳ್ಳಿ ಅವರು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹಿಂಬಾಲಕರಾಗಿ ಕಾರ್ಯನಿರ್ವಹಿಸುತ್ತಿರುವುದು ಮತ್ತು ಜಾರಕಿಹೊಳಿಯವರು ಅಥಣಿ ಮತಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಯತ್ನಿಸಿರುವುದನ್ನು ಗಮನಿಸಿದ ಅಥಣಿ ಮತದಾರರು ಸ್ವಾಭಿಮಾನದಿಂದ ಮತಕ್ಷೇತ್ರದ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರನ್ನು ಮತದಾರರು ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಘಟಾನುಘಟಿ ನಾಯಕರಿಂದ ಪ್ರಚಾರ:
ಶಾಸಕ ಮಹೇಶ್ ಕುಮಟಳ್ಳಿ ಅವರ ಗೆಲುವಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಯ ಘಟಾನುಘಟಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಸಮೀಪದ ಕೋಳಿಗುಡ್ಡ ಗ್ರಾಮದಲ್ಲಿ ಪ್ರಚಾರ ನಡೆಸಿದರೆ, ಅಥಣಿ ಪಟ್ಟಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮಾಜಿ ಸಿಎಂ ಬಿಎಸ್ ವೈ ಮತ್ತು ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಅನೇಕರು ಕುಮಟಳ್ಳಿ ಪರವಾಗಿ ಪ್ರಚಾರ ನಡೆಸಿದರು. ಆದರೆ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರನ್ನು ಮತಕ್ಷೇತ್ರಕ್ಕೆ ಆಮಂತ್ರಿಸಿ ಪ್ರಚಾರ ಸಭೆಗಳನ್ನು ನಡೆಸದೇ ಸ್ಥಳೀಯ ಕಾಂಗ್ರೆಸ್ ಮುಖಂಡರ ಮುಂದಾಳತ್ವದಲ್ಲಿ ಮಾತ್ರ ಸಭೆಗಳನ್ನು ನಡೆಸಿ ಪ್ರಚಾರ ನಡೆಸಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಕ್ಷೇತ್ರದ ಮತದಾರರಲ್ಲಿ ಸ್ವಾಭಿಮಾನದ ಮಂತ್ರವನ್ನು ಬಿತ್ತುವ ಮೂಲಕ ಮತ್ತು ಎದುರಾಳಿಗಳು ಆಡುವ ಅವಮಾನಕರ ಮಾತುಗಳಿಗೆ ಕೆರಳದೇ ನನ್ನ ಮತ ಕ್ಷೇತ್ರದ ಜನರ ಅವರಿಗೆ ಉತ್ತರ ನೀಡುತ್ತಾರೆ ಎಂದು ಹೇಳುವ ಮೂಲಕ ಮತದಾರರ ಪ್ರೀತಿ ವಿಶ್ವಾಸ ಗಳಿಸಿದರು. ಹೀಗಾಗಿ ಮತದಾರರೇ ಅಚ್ಚರಿಯ ಫಲಿತಾಂಶಕ್ಕೆ ಇಂದು ಸಾಕ್ಷಿಯಾಗಿದ್ದಾರೆ. ಅಥಣಿ ಮತ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕಿಂತ ವ್ಯಕ್ತಿಯ ವರ್ಚಸ್ಸು ಮುಖ್ಯ ಎಂಬುದನ್ನು ತೋರಿಸಿದ್ದಾರೆ.

ಲಕ್ಷ್ಮಣ ಸವದಿ ಗೆಲುವಿಗೆ ಕಾರಣಗಳು :

 • 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷ ಸಂಘಟನೆ ಮತ್ತು ಜನಸೇವೆಯಲ್ಲಿ ತೊಡಗಿರುವುದು.
 • ಕೃಷ್ಣಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಮತ್ತು ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ನೆರವಿಗೆ ಧಾವಿಸಿ ಮೂಲಭೂತ ಸೌಕರ್ಯ ಮತ್ತು ಔಷಧಿ ಉಪಚಾರಗಳನ್ನು ಒದಗಿಸಿ, ಪ್ರತಿ ಕುಟುಂಬಕ್ಕೆ ಆಹಾರ ಕಿಟ್ ಗಳನ್ನ ವಿತರಿಸಿರುವುದು.
 • 2019ರ ಉಪಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ವ್ಯಕ್ತಿ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸಿ ತಂದದ್ದು, ಉಪಮುಖ್ಯಮಂತ್ರಿಯಾಗಿ, ಸಾರಿಗೆ ಸಚಿವರಾಗಿ ಅಥಣಿ ಮತಕ್ಷೇತ್ರಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಕೃಷಿ ಮಹಾವಿದ್ಯಾಲಯ ಮಂಜೂರು ಮಾಡಿರುವದು.
 • ಅಥಣಿ ಮತಕ್ಷೇತ್ರದಲ್ಲಿ ಕೆರೆ ತುಂಬುವ ಯೋಜನೆ ಅನುಷ್ಠಾನ ಮತ್ತು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿರುವುದು.

* ಚುನಾವಣಾ ಪೂರ್ವದಲ್ಲಿ ವಿವಿಧ ಸಮುದಾಯಗಳ ಮತ್ತು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದರು.

ಮಹೇಶ ಕುಮಟಳ್ಳಿ ಸೋಲಿಗೆ ಕಾರಣಗಳು

 • 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಮಹೇಶ್ ಕುಮಟಳ್ಳಿ 2019ರ ಉಪಚುನಾವಣೆಯಲ್ಲಿ ಕ್ಷೇತ್ರದ ಜನಾಭಿಪ್ರಾಯ ಕೇಳದೆ ಪಕ್ಷಾಂತರ ಹೊಂದಿರುವುದು.
 • ಪ್ರವಾಹ ಮತ್ತು ಕೊರೋನಾ ಸಂಕಷ್ಟದಲ್ಲಿ ಸಂತ್ರಸ್ಥರ ಮತ್ತು ರೋಗಿಗಳ ನೆರವಿಗೆ ಬಾರದೆ ದೂರ ಉಳಿದಿರುವುದು.
 • ಸ್ಥಳೀಯ ಶಾಸಕರಾಗಿ ತಾಲೂಕ ಆಡಳಿತದ ಮೇಲೆ ಹಿಡಿತ ಸಾಧಿಸದೇ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಯಿತು.
 • ವಿಧಾನಪರಿಷತ್ ಚುನಾವಣೆ ಮತ್ತು ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಪಕ್ಷ ನಿಷ್ಠೆಯಾಗಿ ಕೆಲಸ ಮಾಡದೇ ಇರುವುದು.
 • ಬಿಜೆಪಿ ತಾಲೂಕ ಅಧ್ಯಕ್ಷರ ದಿಡಿರ್ ಬದಲಾವಣೆಯಿಂದ ಕಾರ್ಯಕರ್ತರಲ್ಲಿ ಗೊಂದಲ, ಸವದಿ ಬಣ, ಕುಮಟಳ್ಳಿ ಬಣ ಸೃಷ್ಟಿಯಾಗಿದ್ದು.
 • ಆರ್ ಎಸ್ ಎಸ್ ತಂತ್ರ ಮತ್ತು ಘಟಾನುಘಟಿಗಳ ಪ್ರಚಾರ ಫಲ ನೀಡಲಿಲ್ಲ. ಅವರ ಬೆಂಬಲಿಗರು ನಿಷ್ಠೆಯಿಂದ ಕೆಲಸ ನಿರ್ವಹಿಸದೆ ಇರುವುದು.
 • ಜಾರಕಿಹೊಳಿ ಸಹೋದರರು ಅಥಣಿ ಮತ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿದಲ್ಲದೇ, ಸವದಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಪ್ರಚಾರ ಭಾಷಣ ನಡೆಸಿರುವುದು.