76 ನೇ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಅಫಜಲಪುರ: ಆ.8:ಮುಂಬರುವ ಆಗಸ್ಟ್ 15 ರಂದು 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ ಸಂಜೀವಕುಮಾರ ದಾಸರ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಆ.15 ರಂದು ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಕಚೇರಿಯಲ್ಲಿ ಯಾವುದೇ ಲೋಪದೋಷವಾಗದಂತೆ ಬೆಳೆಗ್ಗೆ 7.30 ಗಂಟೆಗೆ ಧ್ವಜಾರೋಹಣ ನೆರವೇರಿಸಬೇಕು. ನಂತರ 8.30 ಗಂಟೆಗೆ ತಹಸೀಲ್ ಕಚೇರಿ ಆವರಣದಲ್ಲಿ ಶಾಸಕ ಎಂ.ವೈ ಪಾಟೀಲರ ಅಧ್ಯಕ್ಷತೆಯಲ್ಲಿ ನಡೆಯುವ ಧ್ವಜಾರೋಹಣದಲ್ಲಿ ಭಾಗವಹಿಸಬೇಕು. ಧ್ವಜಾರೋಹಣದ ಬಳಿಕ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು ದೇಶ ಪ್ರೇಮ ಹಾಗೂ ಸಮಾಜಕ್ಕೆ ಮಾದರಿಯಾಗುವ ಸಾಂಸ್ಕøತಿಕ ಕಲೆಗಳಿಗೆ ಒತ್ತು ನೀಡಲಾಗಿದ್ದು ಇದರ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರಿಗೆ ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಕಲೆ ಹಾಗೂ ನೃತ್ಯವನ್ನು ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತಿಯ, ಹಾಗೂ ತೃತೀಯ ಸ್ಥಾನ ಹಾಗೂ ಇನ್ನುಳಿದ ತಂಡಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮ ಆಯ್ಕೆ ವಿಭಾಗದ ತೀರ್ಪುಗಾರರಾಗಿ ತಾಲೂಕಾ ಕೃಷಿ ಅಧಿಕಾರಿ ಎಸ್.ಎಚ್ ಗಡಗಿಮನಿ, ತಾ.ಪಂ ಇ.ಓ ರಮೇಶ ಸುಲ್ಫಿ, ಪ್ರಭಾರ ಸಿ.ಪಿ.ಐ ಬಾಸು ಚವ್ಹಾಣ ಅವರಿಗೆ ನೇಮಕ ಮಾಡಲಾಯಿತು. ಅದರಂತೆ ಪಟ್ಟಣದ ಸ್ವಚ್ಛತೆ ಹಾಗೂ ಇನ್ನಿತರ ಕಾರ್ಯಗಳ ನಿರ್ವಹಣೆಗೆ ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಅವರಿಗೆ ವಹಿಸಲಾಯಿತು. ಹೀಗೆ ಇನ್ನಿತರ ಕಾರ್ಯಗಳ ಅಚ್ಚುಕಟ್ಟಿನ ನಿರ್ವಹಣೆಗೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಜವಾಬ್ದಾರಿ ವಹಿಸಿದರು.

ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಿದ ಸಾಧಕರಿಗೆ ವಿಶೇಷವಾಗಿ ಸನ್ಮಾನಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಶರಣಬಸಪ್ಪ ಹೊಸಮನಿ, ಟಿ.ಎಚ್.ಓ ಡಾ. ರವಿಕಿರಣ್ ಎಸ್.ಎಚ್, ಪಶು ಸಂಗೋಪನಾ ಅಧಿಕಾರಿ ಡಾ. ಕೆ.ಎಂ ಕೋಟೆ, ಅಗ್ನಿಶಾಮಕ ಠಾಣಾಧಿಕಾರಿ ವಿಶ್ವನಾಥ ಕಾಮರೆಡ್ಡಿ, ತಾ.ಪಂ ಎ.ಡಿ ರಮೇಶ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.