75 ವರ್ಷ ಸ್ವಾಧೀನದಲ್ಲಿದ್ದ ಜಮೀನಿಗೆ ಸಾಗುವಳಿ ಚೀಟಿ ವಿತರಣೆ

ಕೋಲಾರ,ಸೆ,೭- ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದರೂ ಸಾಗುವಳಿ ಚೀಟಿ ಸಿಗದೇ ಪರಿತಪಿಸುತ್ತಿದ್ದ ರೈತನ ಮನೆಗೆ ಖುದ್ದು ತಹಸೀಲ್ದಾರ್ ನಾಗರಾಜ್ ಭೇಟಿ ನೀಡಿದರು.
ತಾಲ್ಲೂಕಿನ ಸುಗಟೂರು ಹೋಬಳಿ ತಲಗುಂದ ಪುರಹಳ್ಳಿ ಗ್ರಾಮದ ನಿವಾಸಿ ಕಡು ಬಡ ಕುಟುಂಬದ ವೆಂಕಟರಾಮಪ್ಪ ಅವರು ಗ್ರಾಮದ ಸರ್ವೇ ನಂ.೩೪ ರ ಜಮೀನಿನಲ್ಲಿ ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದು, ಕಳೆದ ೨೦೦೩ ರಲ್ಲೇ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೆನ್ನಲಾಗಿದೆ.
ಸಾಗುವಳಿ ಚೀಟಿಗಾಗಿ ಎಷ್ಟೇ ಅಲೆದಾಡಿದರೂ ಪ್ರಯೋಜನವಾಗದಿದ್ದಾಗ ಮನನೊಂದ ವೆಂಕಟರಾಮಪ್ಪ ಸಾಗುವಳಿ ಚೀಟಿ ಸಿಗುತ್ತದೆ ಎಂಬ ವಿಶ್ವಾಸವನ್ನೇ ಕಳೆದುಕೊಂಡು ಸದರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು.ತಾಲ್ಲೂಕು ಕಚೇರಿಯಿಂದ ವಿಳಂಬವಾಗಿರುವ ಕುರಿತು ಮಾಹಿತಿ ಸಿಕ್ಕ ಕೂಡಲೇ ಕಾರ್ಯೋನ್ಮುಖರಾದ ತಹಸೀಲ್ದಾರ್ ನಾಗರಾಜ್ ತಾವೇ ಸ್ವತಃ ಕಡತ ತೆಗೆಸಿ ಸಾಗುವಳಿ ಚೀಟಿ ಸಿದ್ದಪಡಿಸಿಕೊಂಡು ಖುದ್ದು ಪುರಹಳ್ಳಿ ಗ್ರಾಮಕ್ಕೆ ತೆರಳಿ ರೈತ ವೆಂಕಟರಾಮಪ್ಪ ಅವರ ಮನೆಯಲ್ಲೇ ಸಾಗುವಳಿ ಚೀಟಿ ನೀಡಿದರು..