75 ಲಕ್ಷ ನಿವಾಸಿಗಳ ಮೇಲೆ ಧ್ವಜ ಹಾರಿಸುವ ಗುರಿ

ಬೆಂಗಳೂರು, ಆ. ೩- ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದ ಅಂಗವಾಗಿ ಆ. ೧೩ ರ ಸೂರ್ಯೋದಯದಿಂದ ಆ. ೧೫ರ ಸೂರ್ಯಾಸ್ತದ ವರೆಗೆ ರಾಜ್ಯದ ಕನಿಷ್ಠ ೭೫ ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೨೪ ವಿಧಾನಸಭಾ ಕ್ಷೇತ್ರಗಳ ಕನಿಷ್ಠ ತಲಾ ೩೫ ಸಾವಿರ ಮನೆಗಳ ಮೇಲೆ ಅಂದರೆ ೭೫ ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಲಿದೆ ಎಂದರು.
ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದಲ್ಲಿ ೨೦ ಕೋಟಿಗಿಂತ ಹೆಚ್ಚು ಮನೆಗಳಲ್ಲಿ ಧ್ವಜಾರೋಹಣಕ್ಕೆ ಕರೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲೂ ಕನಿಷ್ಠ ೭೫ ಲಕ್ಷ ಮನೆಗಳಲ್ಲಿ ಧ್ವಜಾರೋಹಣಕ್ಕೆ ತಯಾರಿ ನಡೆದಿದೆ ಎಂದರು.
ಸ್ವಾತಂತ್ರ್ಯ ದಿನದಂದು ೧೭೫ ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ತ್ರಿವರ್ಣ ಧ್ವಜ ಯಾತ್ರೆ ನಡೆಯಲಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸೈಕಲ್ ಜಾಥಾ, ಬೈಕ್ ಜಾಥಾವನ್ನು ಯುವ ಮೋರ್ಚಾ ವತಿಯಿಂದ ನಡೆಸಲಾಗುವುದು. ಹಾಗೇಯ ರೈತ ಮೋರ್ಚಾ ವತಿಯಿಂದ ೭೫ ಕಡೆಗಳಲ್ಲಿ ಅಲಂಕೃತ ಎತ್ತಿನ ಬಂಡಿಯಲ್ಲಿ ತ್ರಿವರ್ಣ ಧ್ವಜ ಯಾತ್ರೆಯು ನಡೆಯಲಿದೆ. ಮಹಿಳಾ ಮೋರ್ಚಾ ನೇತೃತ್ವದಲ್ಲಿ ೧೭೫ ಕಡೆಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ವನಕೆ ಓಬವ್ವ ಮತ್ತಿತರ ಭಾವಚಿತ್ರಗಳೊಂದಿಗೆ ತ್ರಿವರ್ಣ ಧ್ವಜದ ಮಹಿಳಾ ಜಾಥಾ ಆಯೋಜಿಸಲಾಗಿದೆ ಎಂದರು.
ವಿಶೇಷವಾಗಿ ಬೆಳಗಾವಿ, ಚಿತ್ರದುರ್ಗ, ವಿಧುರಾಶ್ವತ, ಮಂಗಳೂರು, ಕಲ್ಬುರ್ಗಿಯ ಸುರಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಬೃಹತ್ ತ್ರಿವರ್ಣ ಧ್ವಜ ಯಾತ್ರೆ ನಡೆಯಲಿದ್ದು, ಈ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಗಳ ಮನೆಗಳನ್ನು ಭೇಟಿ ಮಾಡಲಿದ್ದೇವೆ ಎಂದರು.
ಆ. ೧೦, ೧೧ ಮತ್ತು ೧೨ ರಂದು ಪಥಸಂಚಲನ, ಪ್ರಭಾತ್ ಪೇರಿ, ಮ್ಯಾರಥಾನ್, ವಾಕಥಾನ್, ಸೈಕ್ಲೋಥಾನ್‌ಗಳು ನಡೆಯಲಿದ್ದು, ನಗರ ಮತ್ತು ಹಳ್ಳಿಗಳಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳ ಸ್ವಚ್ಚತೆ ಹಾಗೂ ಮಾಲಾರ್ಪಣೆಯೂ ಆಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಜಿಲ್ಲಾ ಪ್ರಭಾರಿ ವಿಕಾಸ್‌ಕುಮಾರ್ ಉಪಸ್ಥಿತರಿದ್ದರು.