75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ ಘರ್ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಕರೆ

ಬೀದರ ಜು 31: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್.12 ರಿಂದ ಆಗಸ್ಟ್.16 ರವರೆಗೆ 5 ದಿನಗಳವರೆಗೆ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಕರೆ ನೀಡಿದರು.

ಅವರು ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗಸ್ಟ್.15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಈಗಾಗಲೇ ಹರ ಘರ್ ತಿರಂಗಾ ರಾಷ್ಟ್ರ ಧ್ವಜಗಳನ್ನು ಜಿಲ್ಲಾ ಪಂಚಾಯತ ವತಿಯಿಂದ 80 ಸಾವಿರ, ನಗರ ಸಭೆ ವತಿಯಿಂದ 20 ಸಾವಿರ ಧ್ವಜಗಳನ್ನು ವಿತರಿಸಲಾಗುತ್ತಿದ್ದು, ಜಿಲ್ಲಾ ಪಂಚಾಯತ ವತಿಯಿಂದ ಪ್ರತಿ ಗ್ರಾಮ ಪಂಚಾಯತಿಗಳಿಗೆ ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳಿಗೆ ರಾಷ್ಟ್ರ ಧ್ವಜವನ್ನು ವಿತರಿಸಲಾಗುತ್ತಿದೆ. ನಗರಸಭೆ ವತಿಯಿಂದ ಪ್ರತಿಯೊಂದು ವಾರ್ಡವಾರು ವಿವಿಧ ಸಂಘ ಸಂಸ್ಥೆಗಳಿಗೂ ವಿತರಿಸಲಾಗುತ್ತಿದೆ ಎಂದರು.

ಹರ ಘರ ತಿರಂಗಾ ಕುರಿತು ಜಾಗೃತಿ ಮೂಢಿಸಲು ಆಗಸ್ಟ್.8 ರಂದು ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಬೆಳಿಗ್ಗೆ 7 ರಿಂದ 8.30 ರವರೆಗೆ ಜಿಲ್ಲಾಡಳಿತ 5 ದಿಕ್ಕುಗಳಿಂದ ರಾಷ್ಟ್ರಧ್ವಜವನ್ನು ಹಿಡಿದು ಸೈಕಲ್ ಜಾಥಾ ಏರ್ಪಡಿಸಿ ನಗರದ ನೆಹರು ಕ್ರೀಡಾಂಗಣದವರೆಗೆ ಆಗಮಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಗಸ್ಟ್.10 ರಂದು ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಗ್ರಾಮ ಪಂಚಾಯತಗಳ ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ ವಿವಿಧ ಶಾಲಾ ಕಾಲೇಜು ಮಕ್ಕಳಿಗೆ ನಗರದ ಮುಖ್ಯ ರಸ್ತೆಯಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದು ಜಾಥಾ ನಗರದ 5 ಪ್ರದೇಶಗಳಿಂದ ಪ್ರಾರಂಭಿಸಿ ನಗರದ ನೆಹರು ಕ್ರೀಡಾಂಗಣದಲ್ಲಿ ಸೇರಿ ಜಾಗೃತಿ ಮೂಡಿಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಆಗಸ್ಟ್.11 ರಂದು ಬೆಳಿಗ್ಗೆ 7 ರಿಂದ 8.30 ಗಂಟೆಯವರೆಗೆ ನಗರದ 5 ಪ್ರದೇಶಗಳಿಂದ 900 ಮಕ್ಕಳನ್ನು ಸೇರಿಸಿ ಪ್ರತಿ 300 ಮಕ್ಕಳಿಗೆ ಕೇಸರಿ ಬಣ್ಣದ ಟೀ ಶರ್ಟ, 300 ಮಕ್ಕಳಿಗೆ ಬಿಳಿ ಬಣ್ಣದ ಟೀ ಶರ್ಟ, 300 ಮಕ್ಕಳಿಗೆ ಹಸಿರು ಬಣ್ಣದ ಟೀ ಶರ್ಟ ಸರಬರಾಜು ಮಾಡಲಾಗುತ್ತಿದ್ದು, 900 ಮಕ್ಕಳೊಂದಿಗೆ ನಗರದ ಗುಂಪಾ ಪ್ರದೇಶದಿಂದ ಜಿಲ್ಲಾ ಕ್ರೀಡಾಂಗಣದವರೆಗೆ (ವಾಕಥಾನ) ಬೆಳಿಗ್ಗೆ 7 ರಿಂದ 8.30 ರ ಕಾಲನಡಿಗೆ ಸಮಯದಲ್ಲಿ ಬೀದರ ಏರಫೋರ್ಸ ವತಿಯಿಂದ ಬೀದರ ನಗರ ಪ್ರದೇಶದ ಮೇಲೆ 3 ವಿಮಾನಗಳಿಂದ 10 ನಿಮಿಷಗಳ ಕಾಲ ರಾಷ್ಟ್ರಧ್ವಜದ ಬಣ್ಣಗಳಿಂದ ಹಾರಾಟ ನಡೆಸಿ ಹರ ಘರ್ ತಿರಂಗಾ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರು ಆಸಕ್ತ ಸಂಘ ಸಂಸ್ಥೆಯ ಅಭಿಮಾನಿಗಳು ಸದರಿ ಬಣ್ಣದ ಟೀ ಶರ್ಟ ಧರಿಸಿ ಬಂದಲ್ಲಿ ಅವರಿಗೆ ಆ ಗುಂಪಿಗೆ ಸೇರಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಆಗಸ್ಟ್.2 ರಿಂದ 15 ರವರೆಗೆ ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ಬೀದರ ಕೋಟೆಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಸಾಯಂಕಾಲ ಶಾಲಾ ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ವೀಕ್ಷಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಮೊಹಮ್ಮದ ನಯೀಮ್ ಮೋಮಿನ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ವಿಜಯಕುಮಾರ ಮಡ್ಡೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.