ಬೀದರ್: ಬೆಳೆ ನಾಶಪಡಿಸುವ ವನ್ಯಜೀವಿಗಳಿಂದ ರಕ್ಷಣೆಗೆ ರೈತ ಸಂಘ ಒತ್ತಾಯ

(ಸಂಜೆವಾಣಿ ವಾರ್ತೆ)
ಔರಾದ: ಜು.16: ಕಾಡು ಹಂದಿ , ಜಿಂಕೆ ಸೇರಿದಂತೆ ಇತರೆ ವನ್ಯಜೀವಿಗಳ ಹಾವಳಿಯಿಂದ ರೈತರ ಬೆಳೆ ಸಂಪೂರ್ಣ ಹಾಳಾಗುತ್ತಿದ್ದು, ಕಾಡುಪ್ರಾಣಿಗಳ ರಕ್ಷಣೆಗೆ ಇಲಾಖೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಒತ್ತಾಯಿಸಿದೆ.
ಔರಾದ ತಾಲೂಕಿನ ಸಂತಪೂರ ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅರಣ್ಯಾಧಿಕಾರಿ ಅಂಕುಶ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದರು.
ಔರಾದ ತಾಲೂಕಿನಾದ್ಯಂತ ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳಿಸಿ ಉತ್ತಮ ಫಸಲು ಬೆಳೆಯುವ ನಿರೀಕ್ಷೆಯಲ್ಲಿದ್ದು, ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಅಭಾವದಿಂದ ಸಂಕಷ್ಟದಲ್ಲಿರುವ ರೈತರಿಗೆ ಕಾಡುಹಂದಿ, ಜಿಂಕೆ, ಮಂಗ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಸಂಪೂರ್ಣ ಬೆಳೆ ನಾಶಪಡಿಸುತ್ತಿವೆ. ಕೃಷಿಯೇ ನಂಬಿಕೊಂಡು ಬದುಕುತ್ತಿರುವ ರೈತರಿಗೆ ವನ್ಯಜೀವಿಗಳ ಹಾವಳಿಯಿಂದ ತತ್ತರಿಸಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಯುಕ್ತ ಸುಮಾರು ವರ್ಷಗಳಿಂದ ತಮ್ಮ ಇಲಾಖೆಗೆ ರೈತರು ಮೌಖಿಕ ಮತ್ತು ಅಖಿತವಾಗಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ವನ್ಯಜೀವಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಪರಿಹಾರ ಸೂಚಿಸಬೇಕು. ಪ್ರಾಣಿಗಳಿಂದ ರೈತರಿಗೆ ಅನಾನೂಕೂಲವಾಗದಂತೆ ತಡೆ ಹಿಡಿಯಬೇಕು. ವಾರದೊಳಗೆ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಮಾಡದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಖುದ್ದಾಗಿ ತಾವೇ ಜವಾಬ್ದಾರರು ಎಂದು ಪ್ರತಿಭಟನಾ ರೈತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಔರಾದ ತಾಲೂಕು ಅಧ್ಯಕ್ಷ ಪ್ರಕಾಶ್ ಬಾವಗೆ ಸೇರಿದಂತೆ ಪ್ರಮುಖರಾದ ಬಸವರಾಜ ಘೂಳೆ, ಪ್ರಭುದಾಸ, ವಿಶ್ವನಾಥ್ ಧರಣೆ, ಝರಣೆಪ್ಪ ದೇಶಮುಖ, ಕೃಷ್ಣಾರೆಡ್ಡಿ, ಹಣಮಂತರಾವ ಬಿರಾದರ, ಪ್ರಕಾಶ್ ಪಾಟೀಲ್, ಮಲ್ಲಿಕಾರ್ಜುನ ಕೋರೆ, ಗಣಪತಿ ದೇಶಪಾಂಡೆ, ಬಸವರಾಜ ಪಾಟೀಲ ಸೇರಿದಂತೆ ಇತರರಿದ್ದರು.