7 ವೇತನ ಜಾರಿಗೆ ಬೈರಪ್ಪ ಆಗ್ರಹ

ಬೆಂಗಳೂರು, ಫೆ. ೧೩- ರಾಜ್ಯ ಸರ್ಕಾರ ಪ್ರತಿ ೫ ವರ್ಷಗಳಿಗೊಮ್ಮೆ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ವೇತನ, ಭತ್ಯೆಗಳ ಪರಿಷ್ಕರಣೆ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಣೆ ಮಾಡುವುದು ಹಿಂದಿನಿಂದಲೂ ಅನುಚಾನವಾಗಿ ನಡೆದು ಬಂದಿದೆ. ಅದರಂತೆ, ರಾಜ್ಯ ಸರ್ಕಾರವು ಶ್ರೀ. ಸುಧಾಕರ್ ರಾವ್. ಭಾ.ಅ.ಸೇ (ನಿ)ರವರ ನೇತೃತ್ವದಲ್ಲಿ ದಿನಾಂಕ: ೧೯.೧೧.೨೦೨೨ ರಂದು ವೇತನ ಆಯೋಗ ರಚನೆ ಮಾಡಿತ್ತು. ಈಗಾಗಲೇ ವೇತನ ಆಯೋಗವು ರಚನೆಯಾಗಿ ಒಂದೂವರೆ ವರ್ಷ ೨ ತಿಂಗಳು ಕಳೆದಿವೆ. ಆದರೂ ಸರ್ಕಾರವು ವೇತನ ಆಯೋಗದಿಂದ ಅಂತಿಮ ವರದಿಯನ್ನು ಪಡೆದಿರುವುದಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಕೂಡಲೇ ವೇತನ ಆಯೋಗದಿಂದ ವರದಿಯನ್ನು ಪಡೆದು ದಿನಾಂಕ: ೧೬.೦೨.೨೦೨೪ ರಂದು ರಾಜ್ಯದ ೨೦೨೪-೨೫ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದು, ಆ ಸಂದರ್ಭದಲ್ಲಿ ವೇತನ ಆಯೋಗದ ವರದಿಯನ್ನು ದಿನಾಂಕ: ೦೧.೦೪.೨೦೨೩ ರಿಂದ ಪೂರ್ವನ್ವಯವಾಗುವಂತೆ ಅನುಷ್ಠಾನಗೊಳಿಸಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್.ಭೈರಪ್ಪ ಒತ್ತಾಯಿಸಿದ್ದಾರೆ.
ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ “ನಗದು ರಹಿತ ಆರೋಗ್ಯ ಭಾಗ್ಯ;; ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಸುಮಾರು ೨ ವರ್ಷಗಳಿಂದಲೂ ಮುಖ್ಯಮಂತ್ರಿಗಳೊಂದಿಗೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ, “ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್” ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ, ಸುಮಾರು ಒಂದು ವರ್ಷಗಳು ಕಳೆದಿವೆ. ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರ್ಥಿಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ತಮ್ಮದೇ ಆದ ಅಭಿಪ್ರಾಯವನ್ನು ನೀಡಿದ್ದಾರೆ. ಆದುದ್ದರಿಂದ ಸರ್ಕಾರ ಕೂಡಲೇ “ಸಂಧ್ಯಾ ಸುರಕ್ಷಾ ಯೋಜನೆ”ಯನ್ನು ನಗದು ರಹಿತವಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
“ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು” ಮಾಡಲು ಸಂಘವು ತೀರ್ಮಾನಿಸಿದ್ದು ಈ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಆಹ್ವಾನಿಸಿದ್ದೇವೆ ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರವರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.