7 ಮಂದಿ ಪರಿಷತ್ ಸದಸ್ಯರಿಗೆ ಹೈಕೋರ್ಟ್ ನೋಟೀಸ್

ಕಲಬುರಗಿ ,ನ.೧೭- ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಆಯ್ಕೆಯ ಹಿನ್ನೆಲೆಯಲ್ಲಿ ಬಿಜೆಪಿಯ ಏಳು ವಿಧಾನಪರಿಷತ್ ಸದಸ್ಯರನ್ನು ಕಲಬುರಗಿ ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಲಬುರಗಿ ಪೀಠ ವಿಧಾನಪರಿಷತ್ ಸದಸ್ಯರಿಗೆ ನೋಟೀಸ್ ಜಾರಿ ಮಾಡಿದೆ.
ವಿಧಾನಪರಿಷತ್ ಸದಸ್ಯರನ್ನು ಸೇರ್ಪಡೆ ಮಾಡಲು ಮುಂದಾದ ಸಂಬಂಧ ಪ್ರಶ್ನಿಸಿ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಅರ್ಜಿ ಸಲ್ಲಿಸಿದ್ದರು ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯರಿಗೆ ಖುದ್ದು ಹಾಜರಾಗುವಂತೆ ನೋಟಿಸ್ ನೀಡಲು ಸೂಚನೆ ನೀಡಿದೆ.
ಕಲಬುರಗಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ಕಲಬುರಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಬಿಜೆಪಿ ಸದಸ್ಯರಾದ ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ, ಪ್ರತಾಪ ಸಿಂಹ ನಾಯಕ್, ಲೆಹರ್ ಸಿಂಗ್, ರಘುನಾಥ ಮಲ್ಕಾಪುರೆ, ಡಾ. ತಳವಾರ ಸಾಬಣ್ಣ ಅವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.
ಇದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಮಹಾನಗರ ಪಾಲಿಕೆಯ ಸದಸ್ಯರಾದ ವರ್ಷಾ ಜಾನೆ ಹಾಗೂ ತೃಪ್ತಿ ಲಾಖೆ ಅವರು ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ನ್ಯಾಯಪೀಠ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರು ವಾದ ಮಂಡಿಸಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಅಧಿಕಾರಿಗಳು ತೊಡಗಿರುವುದರಿಂದ ಕಲಬುರಗಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನು ಸದ್ಯಕ್ಕೆ ನಡೆಸಲು ಆಗುವುದಿಲ್ಲ ಎಂಬ ಕಾರಣ ನೀಡಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್ ಅವರು ಚುನಾವಣೆ ಮುಂದೂಡಿದ್ದಾರೆ.