7ನೇ ವೇತನ ಹಾಗೂ ಹಳೇ ಪಿಂಚಣಿ ನೀತಿ ಜಾರಿಗಾಗಿ ಕೂಡ್ಲಿಗಿ ಸರ್ಕಾರಿ ನೌಕರರ ಆಗ್ರಹ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಫೆ.25 : – ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಜಾರಿಗೊಳಿಸುವುದರ ಜತೆಗೆ ಎನ್ ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿನೀತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು  ಮಾರ್ಚ್ 1ರಿಂದ ನಡೆಸುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರು  ಬೆಂಬಲಿಸಿ ಮುಷ್ಕರದಲ್ಲಿ ಭಾಗವಹಿಸುವುದಾಗಿ  ಸರಕಾರಿ ನೌಕರರ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷ ಪಿ.ಶಿವರಾಜ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡುತ್ತಾ ಇತ್ತೀಚಿಗೆ  ರಾಜ್ಯ ಸರಕಾರ ಸಿಎಂ ಮಂಡಿಸಿದ ಬಜೆಟ್ ನಲ್ಲಿ ಸರಕಾರಿ ನೌಕರರಿಗೆ 7ನೇ ವೇತನ ಜಾರಿ ಮಾಡುವ ಭರವಸೆ ಹುಸಿಯಾಗಿದೆ. ಹಾಗಾಗಿ, ಬೆಂಗಳೂರಿನಲ್ಲಿ ರಾಜ್ಯ ಸರಕಾರಿ ನೌಕರರು ಮಾ.1 ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ರಾಜ್ಯ ಸಮಿತಿ ತೀರ್ಮಾನಿಸಲಾಗಿದೆ. ಅಲ್ಲದೆ, ಪಂಜಾಬ್, ಜಾರ್ಖಂಡ್, ಹಿಮಾಚಲಪ್ರದೇಶ ಹಾಗೂ ಚತ್ತೀಸ್ ಘಡ ರಾಜ್ಯಗಳಲ್ಲಿ ಎನ್ ಪಿಎಸ್ ರದ್ದುಗೊಳಿಸಿದ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತಂದು ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಲಾಗುವುದು. ಆದ್ದರಿಂದ, ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.1 ರಿಂದ ಬೆಂಗಳೂರಿನಲ್ಲಿ ನಡೆಯುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸುವುದರ ಜತೆಗೆ ಕೂಡ್ಲಿಗಿ ತಾಲೂಕಿನ ಸರಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಸಿ.ಅಂಜಿನಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ,  ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ಧಾರಾಧ್ಯ, ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಂಗಪ್ಪ, ಕಾರ್ಯದರ್ಶಿಗಳಾದ ಶಶಿಧರ್, ರಾಘವೇಂದ್ರ, ಉಪಾಧ್ಯಕ್ಷರಾದ ವೆಂಕಟೇಶ್, ಸುರೇಶ್ ಬಾಬು, ಬಸವರಾಜು, ನಾಗರಾಜು ಸಂಘದ ಪದಾಧಿಕಾರಿಗಳಾದ ಅಜ್ಜನಗೌಡ, ತಿಂದಪ್ಪ, ಅಬಕಾರಿ ನಾಗರಾಜ್, ಚನ್ನಬಸಯ್ಯ, ಗೋಪಾಲಕೃಷ್ಣ ಸೇರಿ ಇತರರಿದ್ದರು.