7ನೇ ವೇತನ ಆಯೋಗ ಜಾರಿ, ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ಹೋರಾಟ

ಕೋಲಾರ,ಫೆ,೨೦- ಬಜೆಟ್‌ನಲ್ಲಿ ೭ನೇ ವೇತನ ಆಯೋಗಜಾರಿ, ಎನ್‌ಪಿಎಸ್ ರದ್ದತಿ ಪ್ರಸ್ತಾಪ ಮಾಡದ ಸರ್ಕಾರದ ನಡೆ ವಿರುದ್ದ ಫೆ.೨೧ ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಜಿಲ್ಲೆಯ ನೌಕರರು ಬದ್ದರಾಗಿದ್ದು, ಹೋರಾಟಕ್ಕೆ ಸಿದ್ದರಾಗೋಣ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಕರೆ ನೀಡಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಡೆದ ನೌಕರರ ಸಂಘ ಹಾಗೂ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಫೆ.೨೧ ರಂದು ಸಂಜೆ ೫ ಗಂಟೆಗೆ ಬೆಂಗಳೂರಿನ ನೌಕರರ ಭವನದಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ಕರೆದಿರುವ ಸಭೆಯಲ್ಲಿ ಜಿಲ್ಲೆಯ ನೌಕರರ ಸಂಘ ಹಾಗೂ ವೃಂದ ಸಂಘಗಳ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಒಟ್ಟು ೫೦೦ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದು, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಅಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ದರಾಗಿರೋಣ ಎಂದರು.
ಸಿಬ್ಬಂದಿ ಕೊರತೆ ನಡುವೆಯೂ ಕೆಲಸ ಮಾಡಿದ್ದೇವೆ, ಪುಣ್ಯಕೋಟಿ ಯೋಜನೆಗೆ ಸರ್ಕಾರದ ಮನವಿಗೆ ಸ್ಪಂದಿಸಿ ೪೦ ಕೋಟಿ ನೀಡಿದ್ದೇವೆ,ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಜನರ ಜೀವ ಹಾಗೂ ಸರ್ಕಾರದ ಗೌರವ ಉಳಿಸಿದ್ದೇವೆ ಜತೆಗೆ ಈ ಬಜೆಟ್ ಸಿದ್ದಪಡಿಸಿದವರೂ ನೌಕರರೇ, ಇಷ್ಟಾದರೂ ಬಜೆಟ್‌ನಲ್ಲಿ ವೇತನ ಆಯೋಗ ಜಾರಿ, ಎನ್‌ಪಿಎಸ್ ರದ್ದತಿ ಕುರಿತು ಪ್ರಸ್ತಾಪ ಮಾಡದಿರುವುದು ಬೇಸರ ತರಿಸಿದೆ ಎಂದರು.
ಇಡೀ ಬಜೆಟ್‌ನಲ್ಲಿ ಎಲ್ಲಿಯೂ ರಾಜ್ಯದ ಸರ್ಕಾರಿ ನೌಕರರ ಕುರಿತು ಪ್ರಸ್ತಾಪವೇ ಇಲ್ಲ, ಬಜೆಟ್ ಮಾಡಿದವರೂ ನಾವೇ, ಅದನ್ನು ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ದೇಶನದಂತೆ ಅನುಷ್ಠಾನಗೊಳಿಸುವವರೂ ನಾವೇ, ಇಷ್ಟಾದರೂ ನೌಕರರ ಕನಿಷ್ಟ ಬೇಡಿಕೆಗಳ ಕುರಿತೂ ಸಹಾ ಬಜೆಟ್ ಗಮನಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜೀ ಪ್ರಶ್ನೆಬೇಡ ಹೋರಾಟವಾಗಲಿ
ಜಿಲ್ಲಾ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಕೇಂದ್ರ ಸಮಾನ ವೇತನ ನಮ್ಮ ಆಗ್ರಹವಾಗಿದೆ, ಯಾವುದೇ ರಾಜೀ ಬೇಡ ಬೀದಿಗಿಳಿದು ಹೋರಾಟ ನಡೆಸೋಣ, ಫೆ.೨೧ ರಂದೇ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸೋಣ ಎಂದು ತಿಳಿಸಿ, ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಇವೆಲ್ಲಾ ಕೆಲಸಕ್ಕೆ ಬಾರದು, ಕನಿಷ್ಟ ಮಧ್ಯಂತರ ವರದಿ ಪಡೆದು ನಮ್ಮ ಬೇಡಿಕೆ ಈಡೇರಿಸಲಿ ಎಂದರು.
ಜಿಲ್ಲಾ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಮಾತನಾಡಿ,ಸಂಘದ ಕ್ರಿಯಾಶೀಲತೆಗೆ ಇದು ಸವಾಲಾಗಿದೆ, ಫೆ.೨೧ ರಂದೇ ಅನಿರ್ಧಿಷ್ಟ ಮುಷ್ಕರಕ್ಕೆ ಕರೆ ನೀಡಿದರೆ ಒಳಿತು,ತುರ್ತಾಗಿ ನಿರ್ಧಾರ ಕೈಗೊಳ್ಳಬೇಕು, ನಂತರ ಚುನಾವಣೆ, ನೀತಿ ಸಂಹಿತೆ ಹೆಸರಿನಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತದೆ, ಹೋರಾಟ ನಡೆಸಿದರೆ ಕನಿಷ್ಟ ಮಧ್ಯಾಂತರ ಪರಿಹಾರವಾದರೂ ಸಿಗುತ್ತದೆ ಎಂದು ತಿಳಿಸಿದರು.
ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ನಂದೀಶ್, ಹೋರಾಟದ ಕುರಿತು ಕರಪತ್ರಗಳನ್ನು ಮಾಡಿಸಿ ಇಲಾಖೆಗಳ ನೌಕರರಿಗೆ ವಿತರಿಸೋಣ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಉಪಾಧ್ಯಕ್ಷ ಪುರುಷೋತ್ತಮ್, ನೌಕರರ ಸಂಘದ ಒಗ್ಗಟ್ಟು ಮುರಿಯುವ ಷಡ್ಯಂತ್ರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ, ಇಂತಹಪಟ್ಟಭದ್ರ ಹಿತಾಸಕ್ತಿಗಳ ಕುರಿತು ನೌಕರರು ಎಚ್ಚರಿಕೆ ವಹಿಸಬೇಕು, ನಮ್ಮ ಹೋರಾಟ ಇದಕ್ಕೆ ಬಲಿಯಾಗಬಾರದು ಎಂದರು.
ಸಭೆಯಲ್ಲಿ ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಹಿರಿಯ ಉಪಾಧ್ಯಕ್ಷರಾದ ಸುಬ್ರಮಣಿ, ಖಜಾಂಚಿ ವಿಜಯ್, ಉಪಾಧ್ಯಕ್ಷ ರತ್ನಪ್ಪ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ,ಸಹಕಾರ್ಯದರ್ಶಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಪಿಡಿಒ ನಾಗರಾಜ್, ಕೋರ್ಟ್ ನಾಗರಾಜ್,ಬಿ.ಹರೀಶ್, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್, ರವಿ, ಎಸ್ಪಿ ಕಚೇರಿಯ ನಾಗರಾಜ್, ವೆಂಕಟಾಚಲಪತಿಗೌಡ ಮತ್ತಿತರರು ಉಪಸ್ಥಿತರಿದ್ದರು.