7ನೇ ವೇತನ ಆಯೋಗದ ರಚನೆ ಸ್ವಾಗತಾರ್ಹ

ಕೋಲಾರ, ನ.೧೦-ರಾಜ್ಯ ಸರ್ಕಾರಿ ನೌಕರರ ಆಶಯದಂತೆ ೭ನೇ ವೇತನ ಆಯೋಗ ರಚಿಸಿ ಅಧ್ಯಕ್ಷರನ್ನೂ ಘೋಷಿಸಿರುವುದರಿಂದ ನ.೧೦ ರಂದು ಬೆಳಗ್ಗೆ ೧೦-೩೦ ಗಂಟೆಗೆ ಮುಖ್ಯಮಂತ್ರಿಗಳ ನಿವಾಸದಲ್ಲಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲು ಜಿಲ್ಲೆ ಹಾಗೂ ತಾಲ್ಲೂಕಿನ ಎಲ್ಲಾ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಕಡ್ಡಾಯವಾಗಿ ಹಾಜರಿರುವಂತೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳು ೭ನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾಗಿದ್ದ ಸುಧಾಕರ್ ರಾವ್ ಅವರನ್ನು ನೇಮಕ ಮಾಡಿ ದಾವಣಗೆರೆಯಲ್ಲಿ ಮಾಧ್ಯಮದ ಮೂಲಕ ಘೋಷಿಸಿದ್ದು, ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ,ಸರ್ಕಾರದ ಉನ್ನತ ಅಧಿಕಾರಿಗಳಿಗೆ, ಸರ್ಕಾರ,ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರಿಗೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದ ಲಕ್ಷಾಂತರ ನೌಕರರ ಅತಿ ಪ್ರಮುಖ ಬೇಡಿಕೆಯಾಗಿದ್ದ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ನಡೆದುಕೊಂಡಿದ್ದಾರೆ, ನುಡಿದಂತೆ ನಡೆದ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ರಾಜ್ಯದಸಮಸ್ತ ನೌಕರರು ಋಣಿಗಳಾಗಿದ್ದೇವೆ ಎಂದು ತಿಳಿಸಿದ್ದಾರೆ.
ಈ ವರ್ಷದ ಅಂತ್ಯದೊಳಗೆ ನೌಕರರ ಆಶಯದಂತೆ ೭ನೇವೇತನ ಆಯೋಗ ರಚನೆ ಕುರಿತಂತೆ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಯಾವುದೇ ಹೋರಾಟ, ಘರ್ಷಣೆಯಿಲ್ಲದೇ ನೌಕರರ ನ್ಯಾಯಯುತ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಲ್ಲಿ ಷಡಕ್ಷರಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದ್ದು, ಇದಕ್ಕೆ ಕಾರಣರಾದ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು, ಸಮಸ್ತ ನೌಕರರು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.