7ನೇ ವೇತನಕ್ಕೆ ಬಿಗಿಪಟ್ಟು.
 ಕರ್ತವ್ಯಕ್ಕೆ ನೌಕರರ ಗೈರು, ಕೂಡ್ಲಿಗಿಯಲ್ಲಿ ಬಣಗುಡುತ್ತಿರುವ ಸರ್ಕಾರಿ ಕಚೇರಿಗಳು.


ಕೂಡ್ಲಿಗಿ.ಮಾ.1 :- ಏಳನೇ ವೇತನ ಆಯೋಗ ಜಾರಿಗೆ ತರಬೇಕು ಹಾಗೂ ಎನ್ ಪಿ ಎಸ್ ರದ್ದುಗೊಳಿಸಿ ಹಳೇ ಪಿಂಚಣಿ ನೀತಿ ಜಾರಿಗೆ ತರಬೇಕೆಂಬ ಬಿಗಿಪಟ್ಟಿನಲ್ಲಿರುವ ಸರ್ಕಾರಿ ನೌಕರರು ಇಂದಿನಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು ಇಂದು ಕೂಡ್ಲಿಗಿ ತಾಲೂಕಿನಲ್ಲಿನ ಎರಡು ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಮುಷ್ಕರಕ್ಕೆ ಮುಂದಾಗಿದ್ದಾರೆ.
ತಾಲೂಕು ಕೇಂದ್ರವಾದ ಪಟ್ಟಣದಲ್ಲಿರುವ ಸರ್ಕಾರಿ ಕಚೇರಿಗಳಾದ ತುರ್ತುಸೇವೆಯ ಇಲಾಖೆ ಹೊರತುಪಡಿಸಿ, ತಾಲೂಕು ಆಡಳಿತ ಸೌಧ ಕಚೇರಿ (ತಹಸೀಲ್ದಾರ್ ಕಚೇರಿ ) ಸೇರಿದಂತೆ ತಾಲೂಕು ಪಂಚಾಯತಿ, ಕೃಷಿ, ಸಾರ್ವಜನಿಕ ಶಿಕ್ಷಣ,ಉಪನೋಂದಣಿ ಕಚೇರಿ, ಸಿಡಿಪಿಒ, ಸರ್ವೇ, ಉಪಖಜಾನೆ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಶಾಲಾಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಎಲ್ಲಾ ಸರ್ಕಾರಿ ಇಲಾಖೆಯ ಸಿಬ್ಬಂದಿಗಳು ಇಂದು ಕರ್ತವ್ಯಕ್ಕೆ ಗೈರಾಗುವ ಮೂಲಕ ಯಾವುದೇ ಘೋಷಣೆ ಕೂಗದೆ, ಕಚೇರಿಗಳ ಮುಂದೆ ಪ್ರತಿಭಟನೆ  ಮಾಡದೇ ಮುಷ್ಕರ ನಡೆಸುತ್ತಿದ್ದು ಸರ್ಕಾರಿ ಕಚೇರಿಗಳ ಆವರಣ ಹಾಗೂ ಕಚೇರಿಯೊಳಗಿನ ಖಾಲಿ ಖಾಲಿ ಕುರ್ಚಿಗಳಿಂದ ಬಣಗೊಡುತ್ತಿವೆ.
ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ ಶಿವರಾಜ್, ಪ್ರಧಾನ ಕಾರ್ಯದರ್ಶಿ ನಾಗರಾಜ ಸೇರಿದಂತೆ ಸಂಘದ ಪದಾಧಿಕಾರಿಗಳು, ಪ್ರಾಥಮಿಕ, ಪ್ರೌಢ, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಇತರೆ ಕಚೇರಿ ನೌಕರರು ಒಂದೆಡೆ ಸೇರಿ ಮುಷ್ಕರ ಕುರಿತಾಗಿ ಚರ್ಚೆ ನಡೆಸುತ್ತಿದ್ದಾರೆ.