7ನೇ ಆರ್ಥಿಕ ಗಣತಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ

ಚಿತ್ರದುರ್ಗ, ಜ.7; 7ನೇ ಆರ್ಥಿಕ ಗಣತಿ ಸಂದರ್ಭದಲ್ಲಿ ಗಣತಿದಾರರು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲನೆ ಮಾಡುವುದರ ಜೊತೆಗೆ ಗಣತಿಯ ಮೇಲ್ವಿಚಾರಣೆಯ ಸಂದರ್ಭದಲ್ಲಿ ಕಂಡು ಬಂದ ನ್ಯೂನತೆಗಳನ್ನು ಪಟ್ಟಿ ಮಾಡಿ ವರದಿ ನೀಡಬೇಕು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಆಯೋಜಿಸಿದ್ದ 7ನೇ ಆರ್ಥಿಕ ಗಣತಿಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿನ ಸಂಘಟಿತ, ಅಸಂಘಟಿತ ಆರ್ಥಿಕ ಚಟುವಟಿಕೆಗಳ ಬಗ್ಗೆ ವಿವಿಧ ಉದ್ದಿಮೆಗಳಲ್ಲಿ ತೊಡಗಿರುವ ಕೆಲಸಗಾರರ ಅಂಕಿ-ಅಂಶಗಳನ್ನು ಕಲೆಹಾಕಿ ದೇಶದ ಜಿಡಿಪಿ ಅಂದಾಜು ಮಾಡಲು ಹಾಗೂ ಆರ್ಥಿಕ ಗಣತಿಯಲ್ಲಿ ಸಂಗ್ರಹಿಸುವ ಮಾಹಿತಿಯು ಸರ್ಕಾರದ ಕಾರ್ಯಕ್ರಮಗಳನ್ನು ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಗಣತಿಯ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಆರ್ಥಿಕ ಗಣತಿಯ ನಿಖರವಾದ ಮಾಹಿತಿಯ ಅಗತ್ಯವಿದೆ ಎಂದರು.ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮನಾಯ್ಕ್ ಮಾತನಾಡಿ, 7ನೇ ಆರ್ಥಿಕ ಗಣತಿಯ ಮುಖ್ಯ ಉದ್ದೇಶ ಯೋಜನೆಗಳನ್ನೂ ರೂಪಿಸಲು ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಸ್ವಂತ ಉಪಯೋಗಕ್ಕಲ್ಲದೇ ಕೃಷಿ ಮತ್ತು ಕೃಷಿಯೇತರ ಸರಕು, ಸಾಮಗ್ರಿಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆಗಳು ಮತ್ತಿತರ ಘಟಕಗಳ ಸಂಪೂರ್ಣ ಆರ್ಥಿಕ ಚಟುವಟಿಕೆಗಳ ಅಂಕಿ-ಅಂಶಗಳನ್ನು ಮಾಹಿತಿಯನ್ನು ಕಲೆ ಹಾಕುವುದಾಗಿದೆ ಎಂದರು.
 ಮೊದಲನೇ ಆರ್ಥಿಕ ಗಣತಿ 1977ರಲ್ಲಿ ನಡೆದಿದ್ದು, ಪ್ರತಿ 5  ವರ್ಷಗಳಿಗೊಮ್ಮೆ ಆರ್ಥಿಕ ಗಣತಿ ಕಾರ್ಯ ನಡೆಯುತ್ತದೆ. ಅದೇ ರೀತಿ ಈಗಾಗಲೇ 6ನೇ ಆರ್ಥಿಕ ಗಣತಿ ಮುಗಿದಿದ್ದು, ಪ್ರಸ್ತುತ 7ನೇ ಆರ್ಥಿಕ ಗಣತಿ ಕ್ಷೇತ್ರ ಕಾರ್ಯಕೈಗೊಳ್ಳಲು 2019ರ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮೂರು ತಿಂಗಳ ಅವಧಿಯನ್ನು ನಿಗಧಿಪಡಿಲಾಗಿತ್ತು ಎಂದು ಹೇಳಿದರು.  ಜಿಲ್ಲೆಯ 440 ಸಾಮಾನ್ಯ ಸೇವಾ ಕೇಂದ್ರಗಳ ವತಿಯಿಂದ ನಿಯೋಜನೆಗೊಂಡ ಗಣತಿದಾರರ ಮೂಲಕ 7ನೇ ಆರ್ಥಿಕ ಗಣತಿ ಕಾರ್ಯ ಕೈಗೊಳ್ಳಲಾಗಿದೆ.  ಸಾಮಾನ್ಯ ಸೇವಾ ಕೇಂದ್ರದವರು ಕ್ಷೇತ್ರ  ಗಣತಿ ಮತ್ತು ಮೊದಲನೇ ಹಂತದ ಮೇಲ್ವಿಚಾರಣೆಯು ಶೇ.100ರಷ್ಟು ಮುಕ್ತಾಯಗೊಂಡಿದೆ ಎಂದು ಪ್ರಗತಿ ವರದಿ ನೀಡಿದ್ದಾರೆ ಎಂದರು.
ಮೇಲ್ವಿಚಾರಣೆಯಲ್ಲಿ ವ್ಯತ್ಯಾಸ: ಸಾಮಾನ್ಯ ಕೇಂದ್ರದವರು ಸಂಗ್ರಹಿಸಿದ ಗಣತಿಯ ಮಾಹಿತಿಯಲ್ಲಿ 2ನೇ ಹಂತದ ಮೇಲ್ವಿಚಾರಣೆಯಲ್ಲಿ ಹಲವು ನ್ಯೂನತೆಗಳು ಇವೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು. 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 357003 ಕುಟುಂಬಗಳಿವೆ. ಸಾಮಾನ್ಯ ಸೇವಾ ಕೇಂದ್ರದ ವರದಿ 7ನೇ ಆರ್ಥಿಕ ಗಣತಿ ಪ್ರಕಾರ 587425 ಕುಟುಂಬಗಳು ಇವೆ ಎಂದು ವರದಿ ನೀಡಿದ್ದಾರೆ.  ಇದರಲ್ಲಿ 226753 ಕುಟುಂಬಗಳು ಹೆಚ್ಚಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಇದು ಯಾವುದೇ ಸರ್ವೇಯಲ್ಲಿ ಸಾಧ್ಯವಿಲ್ಲ. ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಖರವಾದ ಮಾಹಿತಿ ನೀಡಿಲ್ಲ ಎಂದು ಹೇಳಿದರು.  
 ಗಣತಿಯ ಸರ್ವೇ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದಾಗಿ ಕೆಲವು ಕಡೆ ಡಬಲ್ ಎಂಟ್ರಿಯಾಗಿರುವುದರಿಂದ ಕುಟುಂಬಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ತಾಂತ್ರಿಕ ತಂಡದ ವತಿಯಿಂದ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ಸಾಮಾನ್ಯ ಸೇವಾ ಕೇಂದ್ರದ ಮೇಲ್ವಿಚಾರರಕರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ನಾಗರಾಜ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ, ಸಾಮಾನ್ಯ ಸೇವಾ ಕೇಂದ್ರದ ಮೇಲ್ವಿಚಾರರಕು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.