67ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ

ಮೈಸೂರು, ನ.14: ಕೊರೋನಾ ಸೋಂಕು -ಆತ್ಮನಿರ್ಭರ ಭಾರತ- ಸಹಕಾರ ಸಂಸ್ಥೆಗಳು ಎಂಬ ಧ್ಯೇಯವನ್ನಿಟ್ಟುಕೊಂಡು ಮೈಸೂರು ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಸಹಕಾರ ಸಪ್ತಾಯವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು ಇಂದು ಮೈಸೂರಿನ ಸಹಕಾರ ಭವನದ ಆವರಣದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಏಳು ಬಣ್ಣದ ಸಹಕಾರಿ ಧ್ವಜವನ್ನು ಹಾರಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಂ.ಡಿಸಿ. ಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ ಹರೀಶ್ ಗೌಡ ಮಾತನಾಡಿ ಮಾನವೀಯತೆ ದೃಷ್ಟಿಯಿಂದಾಗಿ ಇಂದು ಎಲ್ಲಾ ರೀತಿಯಿಂದಲೂ ಸಹಕಾರ ಸಂಘಗಳು ಮತ್ತು ಸಹಕಾರಿಗಳು ಸಂಪೂರ್ಣವಾಗಿ ಸರ್ಕಾರದೊಂದಿಗೆ ಕೈಜೋಡಿಸಿ ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಮೂಲಕ ಪ್ರಮುಖ ಪಾತ್ರವನ್ನು ವಹಿಸಿವೆ. ಇಡೀ ರಾಜ್ಯದಲ್ಲಿ ಸುಮಾರು 40ರಿಂದ 50 ಸಾವಿರ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಕೊರೋನಾ ಸೋಂಕಿನ ವಿವರಣೆಗಳನ್ನು, ಅಂಕಿ- ಅಂಶಗಳನ್ನು ದಾಖಲಿಸಿಕೊಂಡು ಮಹಾಮಾರಿಯನ್ನು ಓಡಿಸುವ ಮತ್ತು ನಿಯಂತ್ರಿಸುವ ಬಗ್ಗೆ ಸರ್ಕಾರಿ ಅಧಿಕಾರಿಗಳೊಂದಿಗೆ ವಿವರಣೆಗಳನ್ನು ಹಂಚಿಕೊಂಡಿದ್ದಾರೆ. ಈ ಸಲುವಾಗಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಎಲ್ಲಾ ಸಹಕಾರಿ ಗಳೊಂದಿಗೆ ಮತ್ತು ಸರ್ಕಾರದೊಂದಿಗೆ ಚರ್ಚಿಸಿ ಸಂಪೂರ್ಣವಾಗಿ ತೊಡಗಿಸಿಕೊಂಡ ಆಶಾ ಕಾರ್ಯಕರ್ತೆಯರಿಗೆ 12.5 ಕೋಟಿ ವೆಚ್ಚದಲ್ಲಿ, ತಲಾ ಮೂರು ಸಾವಿರದಂತೆ, ಸುಮಾರು 41 ಸಾವಿರ ಕಾರ್ಯಕರ್ತೆಯರಿಗೆ ಗೌರವ ಧನವನ್ನು ನೀಡಿದ್ದಾರೆ. ಈ ರೀತಿಯ ಧನವನ್ನು ನೀಡುವ ಮೂಲಕ ಆಶಾ ಕಾರ್ಯಕರ್ತರಿಗೆ ಧೈರ್ಯವನ್ನು ತುಂಬುವ ಪ್ರಯತ್ನವನ್ನು ಮಾಡಿದ್ದಾರೆ ಎಂದರು.
ಈ ರಾಜ್ಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 128 ಕೋಟಿ ಸೇರ್ಪಡೆಯಾಗಿತ್ತು, ಅದರಲ್ಲಿ ನಮ್ಮ ಸಹಕಾರ ಸಂಘದ ವತಿಯಿಂದ, ಸಹಕಾರಿಗಳಿಂದ, ಸರ್ಕಾರದಿಂದ ದೇಣಿಗೆಯಾಗಿ ಶೇಕಡಾ 50ರಷ್ಟು ನೀಡಲಾಗಿದೆ. ಇಂದು ಹಳ್ಳಿಗಳಲ್ಲಿ ರೈತರಿಗೆ ಮಹಿಳೆಯರಿಗೆ ಉಪದೇಶವನ್ನು ಕೊಡುತ್ತಾ ಇರುವಂಥದ್ದು ನಮ್ಮ ಸಹಕಾರಿ ಸಂಸ್ಥೆಗಳು. ಈ ಸಂಘಗಳು ಲಾಭವಿಲ್ಲದೆ ನಿಸ್ವಾರ್ಥದಿಂದ ಕೆಲಸವನ್ನು ನಿರ್ವಹಿಸುತ್ತಿದೆ. ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಿದ ಈ ಸಹಕಾರಿಗಳ ಪಾತ್ರ ಮಹತ್ವವಾದದ್ದು ಎಂದರು.
ನಮ್ಮ ದೇಶದ ಆರ್ಥಿಕತೆಗೆ ಪರ್ಯಾಯವಾಗಿ ನಮ್ಮ ಸಹಕಾರಿ ಸಂಘದ ಆರ್ಥಿಕ ವ್ಯವಸ್ಥೆ ಇದೆ ಎಂದರೆ ತಪ್ಪಾಗಲಾರದು. ಇಂದು ಲಕ್ಷಾಂತರ ಸಹಕಾರ ಸಂಘಗಳು ಕೆಲಸವನ್ನು ನಿರ್ವಹಿಸುತ್ತಿದೆ. ಕೊರೋನಾ ಕಳೆದ ನಂತರ ಬಹಳಷ್ಟು ನಿರುದ್ಯೋಗದ ಸಮಸ್ಯೆಗಳು ಕಂಡುಬರುತ್ತದೆ. ಆರ್ಥಿಕ ವ್ಯವಸ್ಥೆ ಇಂದು ನಿರ್ಮಲವಾಗಿದೆ, ಆದ್ದರಿಂದ ಇಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಮಾಡುತ್ತಿವೆ. ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಸಹಕಾರ ಸಂಘಗಳು ಪ್ರಾಮಾಣಿಕ ರೀತಿಯಲ್ಲಿ ತಲುಪಿಸುವ ಪ್ರಯತ್ನವನ್ನು ಮಾಡುತ್ತಿವೆ. ಶೇಕಡ 90ರಷ್ಟು ಆದರೂ ಈ ಎಲ್ಲಾ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿವೆ. ಹಾಲು ಉತ್ಪಾದಕರಿಗೆ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಡೈರಿಗಳು ಮಾಡುತ್ತಿವೆ. ಹೌಸಿಂಗ್ ಸೊಸೈಟಿ ಅವರು ಕಡಿಮೆ ದರದಲ್ಲಿ ಜನರಿಗೆ ಸೈಟನ್ನು ಕೊಡುವಂತಹ ಕೆಲಸವನ್ನು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಪರಿಸ್ಥಿತಿಯನ್ನು ಎದುರಿಸಬೇಕಾದರೆ ನಾವೆಲ್ಲರೂ ಸ್ವಾವಲಂಬಿಗಳಾಗಬೇಕು. ಈ ರೀತಿಯ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಸಹಕಾರಿಗಳು ಮತ್ತು ಸಹಕಾರ ಸಂಸ್ಥೆಗಳು ಆರ್ಥಿಕತೆಗೆ ಬಲವನ್ನು ತರುವಂತಹ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಇಂದು ಬಹಳಷ್ಟು ಮಂದಿಯನ್ನು ನೆನಪಿಸಿಕೊಳ್ಳಬೇಕು. ನಮ್ಮ ಏಷ್ಯಾದಲ್ಲಿ ಮೊದಲ ಬಾರಿಗೆ ಸಿದ್ದಪ್ಪಗೌಡರ ಕೊಡುಗೆ ಅಪಾರವಾದದ್ದು, ಇವರನ್ನು ಪ್ರತಿಯೊಂದು ಸಹಕಾರ ಸಂಸ್ಥೆಗಳು ಮಾರ್ಗದರ್ಶಕರಾಗಿ ಇಟ್ಟುಕೊಂಡು ನಿಷ್ಠೆಯಿಂದ ಕೆಲಸವನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ಹೆಚ್. ವಿ.ರಾಜೀವ್,ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷರಾದ ಬಿ.ಎಂ ಸದಾನಂದ, ಒಕ್ಕೂಟದ ನಿರ್ದೇಶಕರಾದ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.