ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು,ಏ.೧೩: ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ಚುನಾವಣೆಗೆ ಇಂದು ಅಧಿಸೂಚನೆ ಹೊರ ಬಿದ್ದಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆಗೆ ಈಗಾಗಲೇ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ್ದು, ಅದರಂತೆ ಮೇ ೧೦ ರಂದು ನಡೆಯಲಿರುವ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಭಾರತ ಚುನಾವಣಾ ಆಯೋಗದ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು ಚುನಾವಣಾ ಆಯೊಗದ ಹೆಸರಿನಲ್ಲಿ ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಚುನಾವಣಾ ಅಧಿಸೂಚನೆ ಹೊರ ಬೀಳುತ್ತಿದ್ದಂತೆಯೇ ಎಲ್ಲ ೨೨೪ ಕ್ಷೇತ್ರಗಳಲ್ಲೂ ನಾಮಪತ್ರ ಸಲ್ಲಿಕೆಯೂ ಆರಂಭವಾಗಿದೆ.
ಚುನಾವಣೆಗೆ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಇಂದಿನಿಂದ ಏ. ೨೦ರವರೆಗೂ ಸಲ್ಲಿಸಬಹುದಾಗಿದೆ. ನಾಳೆ ಏ. ೧೫ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಪ್ರಯುಕ್ತ ರಜೆ ಇದೆ, ಹಾಗೆಯೇ ೧೬ ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಈ ಎರಡು ದಿನ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ನಾಮಪತ್ರಗಳ ಪರಿಶೀಲನಾ ಕಾರ್ಯ ಏ. ೨೧ ರಂದು ನಡೆಯಲಿದ್ದು, ಏ. ೨೪ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ ೩ ಗಂಟೆಯೊಳಗೆ ನಾಮಪತ್ರಗಳನ್ನು ಹಿಂಪಡೆಯಬಹುದಾಗಿದೆ.
ಮತದಾನ ಮೇ ೧೦ ರಂದು ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆವರೆಗೂ ಮತದಾನ ನಡೆಯಲಿದೆ. ಮತ ಎಣಿಕೆ ಮೇ ೧೩ ರಂದು ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ನಾಮಪತ್ರ ಸಲ್ಲಿಕೆಗೆ ನಿಯಮ
ನಾಮಪತ್ರಗಳನ್ನು ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಒಟ್ಟು ೫ ಜನರಿಗೆ ಮಾತ್ರ ಚುನಾವಣಾ ಅಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶವಿದೆ. ಹೆಚ್ಚಿನ ಜನ ಸೇರಲು ಅವಕಾಶವಿಲ್ಲ. ಚುನಾವಣಾ ಅಧಿಕಾರಿಗಳ ಕಚೇರಿಯ ೧೦೦ ಮೀ. ವ್ಯಾಪ್ತಿಯಲ್ಲಿ ಅಭ್ಯರ್ಥಿಗೆ ಸೇರಿದ ಮೂರು ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿರುತ್ತದೆ.

  • ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ
  • ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸು
  • ಏ. ೨೦ ನಾಮಪತ್ರ ಸಲ್ಲಿಕೆಗೆ ಕಡೆ ದಿನ
  • ಏ. ೨೧ ನಾಮಪತ್ರಗಳ ಪರಿಶೀಲನೆ
  • ಏ. ೨೪ ನಾಮಪತ್ರ ವಾಪಸ್ಸಿಗೆ ಕಡೆ ದಿನ
  • ಮೇ ೧೦ ರಂದು ಮತದಾನ
  • ಮೇ ೧೩ ಫಲಿತಾಂಶ ಪ್ರಕಟ

ನಗರದ ಸೌತ್‌ಎಂಡ್ ಸರ್ಕಲ್‌ನಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಇಂದು ನಾಮಪತ್ರ ಸಲ್ಲಿಸಿದ್ದು ಕಚೇರಿಯ ಹೊರಗಡೆ ನಿಂತಿರುವ ಅವರ ಬೆಂಬಲಿಗರು.

ಮುಗಿಯದ ಬಂಡಾಯ
ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಗೊಂಡಿದ್ದ ಬಂಡಾಯ ಅಸಮಾಧಾನ ಇನ್ನೂ ತಣಿಯದಿರುವಾಗಲೇ ಬಿಜೆಪಿ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ಪ್ರಕಟಿಸಿ ೭ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವುದು ಬಂಡಾಯ ಮತ್ತಷ್ಟು ತಾರಕಕ್ಕೇರಿದೆ. ಟಿಕೆಟ್ ನಿರಾಕರಿಸಲ್ಪಟ್ಟಿರುವ ಹಾಲಿ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ನೆಹರು ಓಲೇಕಾರ್, ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಮೂಡಿಗೆರೆಯ ಹಾಲಿ ಶಾಸಕ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯ ಸ್ಪರ್ಧೆಗೆ ಅಣಿಯಾಗಿದ್ದಾರೆ. ಹಾವೇರಿಯ ನೆಹರು ಓಲೇಕಾರ್ ಸಹ ಬಂಡಾಯವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಹಾಗೆಯೇ ಟಿಕೆಟ್ ನಿರಾಕರಿಸಲ್ಪಟ್ಟಿರುವ ಕಲಘಟಗಿಯ ನಿಂಬಣ್ಣನವರ್, ಮಾಯಕೊಂಡದ ಲಿಂಗಣ್ಣನವರ್, ಬೈಂದೂರಿನ ಸುಕುಮಾರ ಶೆಟ್ಟಿ ಸಹ ಪಕ್ಷದ ತೀರ್ಮಾನಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಇವರೆಲ್ಲ ಅನ್ಯ ಪಕ್ಷಗಳತ್ತ ಮುಖ ಮಾಡುವ ಸಾಧ್ಯತೆ ಇದೆ.
ಮೊದಲ ಪಟ್ಟಿಯಲ್ಲಿ ೮ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ೨ನೇ ಪಟ್ಟಿಯಲ್ಲಿ ೭ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹಾಗಾಗಿ, ಬಂಡಾಯದ ಕೆಂಡ ನಿಗಿನಿಗಿಯಾಗಿದೆ. ಬಂಡಾಯವನ್ನು ಶಮನಗೊಳಿಸಲು ಬಿಜೆಪಿ ನಾಯಕರು ಹರಸಾಹಸ ನಡೆಸಿದ್ದು, ಅತೃಪ್ತರ ಮನವೊಲಿಸುವ ಕೆಲಸ ನಡೆಸಿದ್ದರಾದರೂ ಬಂಡಾಯ, ಅಸಮಾಧಾನ, ಅತೃಪ್ತಿ ತಣಿದಿಲ್ಲ. ಟಿಕೆಟ್ ಕೈ ತಪ್ಪಿರುವ ಹಲವರು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿರುವುದು ಬಿಜೆಪಿ ನಾಯಕರಿಗೆ ತಲೆನೋವು ತಂದಿದೆ. ಅತೃಪ್ತರ ಮನವೊಲಿಸುವ ಕಾರ್ಯ ನಡೆದಿದ್ದು, ಇದರಲ್ಲಿ ಬಿಜೆಪಿ ನಾಯಕರು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ನಿರಾಣಿ ಸೇರಿ ಹಲವರ ನಾಮಪತ್ರ
ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆಯೇ ಮೊದಲ ದಿನ ಹಲವು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೀಳಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಅಫ್ಜಲ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಲೀಕಯ್ಯ ಗುತ್ತೇದಾರ್ ಸಹ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಳಂದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಹೇಶ್ವರಿ ವಾಲಿ, ಸೇಡಂ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ್ ಅವರು ಇಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಕಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಉಪಸ್ಥಿತರಿದ್ದರು.
ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಿಂದ ಮಾಜಿ ಮೇಯರ್ ಕಾಂಗ್ರೆಸ್‌ನ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಕ್ಷೇತ್ರದಿಂದ ಕೆಜಿಎಫ್ ಬಾಬು ಸಹ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.ಕೋಲಾರ ಕ್ಷೇತ್ರದಲ್ಲಿ ಕೆಆರ್‌ಎಸ್ ಪಕ್ಷದ ಇಂದಿರಾರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.
ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಸಹ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.