ಶ್ರೀನಗರ,ಜೂ.30- ಜಮ್ಮು ಕಾಶ್ಮೀರದ ವಾರ್ಷಿಕ 62 ದಿನಗಳ ಅಮರನಾಥ ಯಾತ್ರೆ ನಾಳೆಯಿಂದ ಆರಂಭವಾಗಲಿದ್ದು ಯಾತ್ರಾರ್ಥಿಗಳು ಜಮ್ಮುವಿನ ಮೂಲ ಶಿಬಿರದಲ್ಲಿ ಜಮಾಯಿಸಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ 62 ದಿನಗಳ ಯಾತ್ರೆ ಆಗಸ್ಟ್ 31 ರಂದು ಮುಕ್ತಾಯಗೊಳ್ಳುತ್ತದೆ, ಇದು ಶಿವನ ವಾಸಸ್ಥಾನವೆಂದು ನಂಬಲಾದ ಅಮರನಾಥ ಗುಹೆಗೆ ಭೇಟಿ ನೀಡುವ ಹಿಂದೂಗಳಿಗೆ ಪ್ರಮುಖ ತೀರ್ಥಯಾತ್ರೆತಾಗಿದೆ.
ನಾಳೆ ಮೂಲ ಶಿಬಿರದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇಲ್ಲಿಂದ ಮೊದಲ ಬ್ಯಾಚ್ ಅನ್ನು ಚಾಲನೆ ನೀಡಲಿದ್ದಾರೆ.ಯಾತ್ರೆಗಾಗಿ ಮೊದಲ ಬ್ಯಾಚ್ ಯಾತ್ರಿಕರು ಭಗವತಿನಗರ ಮತ್ತು ಇತರ ಸೌಲಭ್ಯ ಕೇಂದ್ರಗಳ ಬೇಸ್ ಕ್ಯಾಂಪ್‍ನ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.
ಜಮ್ಮು ನಗರದ ವಿವಿಧ ಶಿಬಿರಗಳಲ್ಲಿ ಬಿಗಿ ಭದ್ರತೆ ನಡುವೆ ಅಮರನಾಥ ಯಾತ್ರೆ ಕೈಗೊಳ್ಳು ಭಕ್ತರು ಉತ್ಸಕರಾಗಿದ್ದಾರೆ. ಯಾತ್ರೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಯಾತ್ರಾರ್ಥಿಗಳು ಕಾಶ್ಮೀರ ಕಣಿವೆಯ ಬಾಲ್ಟಾಲ್ ಮತ್ತು ನುನ್ವಾನ್ ಎಂಬ ಎರಡು ಮೂಲ ಶಿಬಿರಗಳಿಗೆ ತೆರಳುತ್ತಾರೆ, ಅಲ್ಲಿಂದ ಅವರು ನಾಳೆ ಮುಂದಿನ ಪ್ರಯಾಣ ಕೈಗೊಳ್ಳಲಿದ್ದಾರೆ. ಜಮ್ಮು ಕಾಶ್ಮೀರ ಆಡಳಿತಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಯಾತ್ರಾರ್ಥಿಗಳಿಗಾಗಿ ಸ್ಥಳದಲ್ಲೇ ತತ್ಕಾಲ್ ನೋಂದಣಿ ಪ್ರಾರಂಭಿಸಿದೆ.
ಲಂಗಾರ್ ಸಮಿತಿಗಳೂ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಿದ್ಧತೆ ಆರಂಭಿಸಿವೆ.ಜಿಲ್ಲೆಯಾದ್ಯಂತ ಸುಮಾರು 33 ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನೋಂದಣಿ ಕೇಂದ್ರಗಳಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್‍ಗಳನ್ನು ನೀಡಲಾಗುವುದು ಎಂದು ಜಮ್ಮುವಿನ ಜಿಲ್ಲಾಧಿಕಾರಿ ಅವ್ನಿ ಲವಾಸಾ ತಿಳಿಸಿದ್ದಾರೆ.
ಯಾತ್ರಾರ್ಥಿಗಳು “ತತ್ಕಾಲ್ ನೋಂದಣಿ” ಟೋಕನ್ ಸಂಖ್ಯೆಯನ್ನು ಜಮ್ಮು ರೈಲ್ವೆ ನಿಲ್ದಾಣದಿಂದಲೇ ಪಡೆಯುತ್ತಾರೆ ಮತ್ತು ನೋಂದಣಿಗೆ ಸ್ಥಳ ಮತ್ತು ದಿನಾಂಕವನ್ನು ಟೋಕನ್‍ನಲ್ಲಿ ನಮೂದಿಸಲಾಗುವುದು, ಇದಕ್ಕಾಗಿ ಯಾತ್ರಿಕರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ವೈಷ್ಣವಿ ಧಾಮ್, ಮಹಾಜನ ಸಭಾ, ಪಂಚಾಯತ್ ಘರ್‍ನಲ್ಲಿ ಯಾತ್ರಿಕರ ತತ್ಕಾಲ್ ನೋಂದಣಿಗಾಗಿ 5 ಕೌಂಟರ್‍ಗಳನ್ನು ಮತ್ತು ಸಾಧುಗಳ ನೋಂದಣಿಗಾಗಿ ಗೀತಾ ಭವನ ಮತ್ತು ರಾಮಮಂದಿರದಲ್ಲಿ ಎರಡು ಕೌಂಟರ್‍ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ಧಾರೆ.
ಇಲ್ಲಿಯವರೆಗೆ, 3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ವಿವಿಧ ನೋಂದಣಿ ಕೇಂದ್ರಗಳಿಂದ ಯಾತ್ರೆಗಾಗಿ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡಿದ್ದಾರೆ.