60:40 ಒಪ್ಪಂದದ ರೂವಾರಿ ಯಾರು? ಆತ್ಮಸಾಕ್ಷಿಯಿಂದ ಒಪ್ಪಿಕೊಳ್ಳಬೇಕು: ನಿತೀನ್ ಗುತ್ತೇದಾರ್

ಅಫಜಲಪುರ:ಮಾ.23: ಇತ್ತೀಚೆಗೆ ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಹೇಳಿಕೆ ನೀಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ 60:40 ಒಪ್ಪಂದಕ್ಕೆ ನಿತೀನ್ ಹೆಡ್ ಮಾಸ್ಟರ್ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಅವರು ಹೇಳಿರುವ ಮಾತಿನಲ್ಲಿ ಸತ್ಯಾಂಶ ಇದ್ದರೆ ಈ ಭಾಗದ ಪ್ರಸಿದ್ಧ ಧಾರ್ಮಿಕ ಸ್ಥಳಗಳಾದ ದತ್ತಾತ್ರೇಯ ಹಾಗೂ ಭಾಗ್ಯವಂತಿ ದೇವಸ್ಥಾನಕ್ಕೆ ಆತ್ಮಸಾಕ್ಷಿಯಿಂದ ಬಂದು ಆಣೆ ಪ್ರಮಾಣ ಮಾಡಲಿ ಎಂದು ಜಿ.ಪಂ ಮಾಜಿ ಅಧ್ಯಕ್ಷ ಸವಾಲು ಹಾಕಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಪ್ಪಂದ ಇರುವುದರ ಬಗ್ಗೆ ಅವರೇ ಖುದ್ದಾಗಿ ಒಪ್ಪಿಕೊಂಡಿದ್ದಾರೆ. ಒಪ್ಪಂದಕ್ಕೆ ಹೆಡ್ ಮಾಸ್ಟರ್ ನಾನಲ್ಲ ಅವರ ಸುಪುತ್ರ ಹೆಡ್ ಮಾಸ್ಟರ್.

2014ರಲ್ಲಿ ಜಿಪಂ ಅಧ್ಯಕ್ಷನಾದ ಮೇಲೆ ನಾನು ಮತ್ತೆ ಯಾವ ಅಧಿಕಾರವನ್ನು ಪಡೆದುಕೊಂಡಿಲ್ಲ. ಸುಮ್ಮನೆ ಗೊಂದಲ ಸೃಷ್ಟಿಸಬಾರದು.

ಅವರು ಹಿರಿಯರು ಹೀಗಾಗಿ ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ಆದರೆ ನನ್ನ ಬಳಿ ಅವರ ಕುರಿತಾಗಿ ಸಾಕಷ್ಟು ವಿಷಯಗಳು ಇವೆ. ಇದೇ ರೀತಿ ಇನ್ನೊಮ್ಮೆ ಮಾತನಾಡಿದರೆ ಎಲ್ಲವನ್ನೂ ಬಹಿರಂಗ ಪಡಿಸಬೇಕಾಗುತ್ತದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ರಾಜಾರೋಷವಾಗಿ ಅಕ್ರಮವಾಗ ಮರಳುಗಾರಿಕೆ ಯಾರು ಮಾಡಿದ್ದಾರೆ ಎಂದು ಪೆÇೀಲಿಸರೆ ಹೇಳುತ್ತಾರೆ.

ಇನ್ನು ಕ್ಷೇತ್ರದ ವಿಷಯ ಮಾತನಾಡುವುದಾದರೆ ತಾಲೂಕಿನ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. 2018ರಲ್ಲಿ ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿ 6 ವರ್ಷಗಳು ಕಳೆದರೂ ಸಹ ಇಲ್ಲಿವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಪದೇ ಪದೇ ಶಾಸಕರು ಮತ್ತು ಅಧಿಕಾರಿಗಳು ಸೇರಿಕೊಂಡು ಕಾಮಗಾರಿ ಮುಕ್ತಾಯ ಸಮಯವನ್ನು ಮುಂದುವರಿಸಿದರೆ ಕಾಮಗಾರಿ ಮುಗಿಯುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ತಾಲೂಕಿನಲ್ಲಿ ಜಲ ಜೀವನ ಮಿಷನ್ ಯೋಜನೆಯ ಸಂಪೂರ್ಣ ಕಾಮಗಾರಿಗಳು ಕಳಪೆ ಮಟ್ಟದಿಂದ ನಡೆದಿದ್ದು, ಯಾವ ಹಳ್ಳಿಗೂ ಸರಿಯಾದ ರೀತಿಯಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಈ ಯೋಜನೆ ಲಾಭ ಜನಸಾಮಾನ್ಯರಿಗೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಈಗ ನೀರು ಇಲ್ಲದಿರುವುದರಿಂದ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಒಣಗಿವೆ. ಹೀಗಾಗಿ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಇನ್ನು ಶಿವಕುಮಾರ್ ನಾಟೀಕಾರ ಅವರು ಭೀಮಾ ನದಿಗೆ ನೀರು ಹರಿಸುವಂತೆ ಕಳೆದ 8 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಈ ಸತ್ಯಾಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನೀರು ಹರಿಸುವ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲಾಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ತುಕಾರಾಮಗೌಡ ಪಾಟೀಲ್,ದಿಲೀಪ್ ಪಾಟೀಲ್, ವಿಶ್ವನಾಥ ರೇವೂರ, ರಾಜಶೇಖರ ಜಿಡ್ಡಗಿ,ರಾಜುಗೌಡ ಅವರಳ್ಳಿ,ರವಿ ಕುಲಾಲಿ, ಸುಭಾಷ್ ರಾಠೋಡ, ಮಹಾಂತೇಶ ಬಳೂಂಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಬೆಂಬಲಿಸಿದ ಪ್ರಮುಖರ ಜೊತೆ ಏ. 1 ಅಥವಾ 2 ರಂದು ಚರ್ಚಿಸಿ ತಾಲೂಕಿನ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷದ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುತ್ತೇನೆ.
-ನಿತೀನ ಗುತ್ತೇದಾರ್ ಜಿಪಂ ಮಾಜಿ ಅಧ್ಯಕ್ಷರು.