60ರ ಕಾಲಘಟ್ಟ ನೆನಪಿಸುವ ಆಚಾರ್ ಅಂಡ್ ಕೋ..

•             ಚಿ.ಗೋ ರಮೇಶ್

ಬೆಂಗಳೂರಿನ 60ರ ದಶಕದ ಅವಿಭಕ್ತ ಕುಟುಂಬದ ಕಥೆಯನ್ನು “ಆಚಾರ್ ಅಂಡ್ ಕೋ” ಚಿತ್ರದ ಮೂಲಕ ತೆರೆಗೆ ಕಟ್ಟಿಕೊಡಲು ಯುವ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಮುಂದಾಗಿದ್ದಾರೆ.

ಪಿಆರ್‍ಕೆ ಪ್ರೊಡಕ್ಷನ್ ಸಂಸ್ಥೆಯಿಂದ ಚಿತ್ರ ನಿರ್ಮಿಸಲಾಗಿದ್ದು ಮುಂದಿನವಾರ ಚಿತ್ರ ತೆರೆಗೆ ಬರಲಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.

ಚಿತ್ರದಲ್ಲಿ ಹಿರಿಯ ಕಲಾವಿದ ಅಶೋಕ್, ಸುದಾ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಮಾತನಾಡಿ, ಆಚಾರ್ ಅಂಡ್ ಕೋ ಚಿತ್ರದ ಕಥೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಹೇಳಿದ್ದೆ ಅವರು ಕೇಳಿ ಮೆಚ್ಚಿಕೊಂಡಿದ್ದರು. ಅದನ್ನು ಅಶ್ವಿನಿ ಮೇಡಂ ಅವರ ಬಳಿ ಚರ್ಚೆ ಮಾಡಿದ್ದರು. ಅಪ್ಪು ಸರ್ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕಥೆ ಕೇಳಿ ನಮ್ಮ ಮೇಲೆ ನಂಬಿಕೆ ವಿಶ್ವಾಸವಿಟ್ಟು ಪೆÇ್ರೀತ್ಸಾಹ ನೀಡಿದರು. ಯಾವುದೇ ವಿಷಯವನ್ನು ಅವರು ತುರುಕುವ ಕೆಲಸ ಮಾಡಲಿಲ್ಲ. ಹೆಚ್ಚು ಸ್ವಾತಂತ್ರ್ಯ ನೀಡಿದ್ದರು. ಹೀಗಾಗಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.

ಬೆಂಗಳೂರಿನ ಮಧುಸೂದನ್ ಆಚಾರ್, ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ನಡೆಯುವ ಕಥೆ. ಅರವತ್ತರ ದಶಕದಲ್ಲಿ ನಡೆಯುವ ಕಥೆಯಲ್ಲಿ ಅಧುನಿಕತೆ ಕಾಣಬಾರದು ಎನ್ನುವ ಉದ್ದೇಶದಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಛಾಯಾಗ್ರಹಕ ಅಭಿಮನ್ಯು ಸದಾನಂದನ್ , ನಟರಾದ ಹರ್ಷಿಲ್ ಕೌಶಿಕ್ ಸೇರಿದಂತೆ ಮತ್ತಿತರರು ಮಾಹಿತಿ ಹಂಚಿಕೊಂಡರು.

ಕಂಟೆಂಟ್‍ಗೆ ಆದ್ಯತೆ

ಚಿತ್ರ ನಿರ್ಮಾಣ ಮಾಡುವಾಗ ಒಳ್ಳೆಯ ಕಂಟೆಂಟ್‍ಗಳಿಗೆ ಆದ್ಯತೆ ನೀಡುತ್ತೇವೆ. ಅದನ್ನು ಬಿಟ್ಟು ಯಾವುದೇ ತಾರತಮ್ಯ ಮಾಡುವುದಿಲ್ಲ. ಮಹಿಳಾ ನಿರ್ದೇಶಕರು ಮತ್ತು ತಂತ್ರಜ್ಞರಿಗೂ ಹೆಚ್ಚು ಒತ್ತು ನೀಡುತ್ತೇವೆ. ಚಿತ್ರ ನೋಡಿದ್ದೇನೆ ಚೆನ್ನಾಗಿ ಮೂಡಿ ಬಂದಿದೆ. – ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ಮಾಪಕಿ

ಕಮಿಟ್‍ಮೆಂಟ್ ಇಲ್ಲ

ನಾಟಕ ನಿಂತು ಹೋದ ಮೇಲೆ ಸಿನಿಮಾ ಒಂದೇ ಮನರಂಜನೆಯಾಗಿತ್ತು. ಹೀಗಾಗಿ ನಟರು, ನಿರ್ದೇಶಕರು, ನಿರ್ಮಾಪಕರು ಪ್ರೀತಿಯಿಂದ ಕೆಲಸ ಮಾಡುತ್ತಿದ್ದರು., ಈಗ ಶೂಟಿಂಗ್‍ಗೆ ಹೋಗ್ತೇವೆ ಬರ್ತೇವೆ ಅಷ್ಟೇ. ಯಾರಿಗೂ ಕಮಿಟ್‍ಮೆಂಟ್ ಇಲ್ಲ. ಡಬ್ಬಿಂಗ್ ಬಂದ ಮೇಲೆ ಕನ್ನಡ ಚಿತ್ರರಂಗ ಉಳಿಯುತ್ತದಾ ಎನ್ನುವ ಆತಂಕ ಸೃಷ್ಠಿಯಾಗಿದೆ. ಕನ್ನಡ ಚಿತ್ರರಂಗ ಮತ್ತ ವಿಜೃಂಬಣೆಯಿಂದ ಮತ್ತೆ ಮೆರೆಯಬೇಕಾದರೆ ಸರ್ಕಾರ ಮತ್ತು ಚಿತ್ರರಂಗ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. – ಅಶೋಕ್, ಹಿರಿಯ ನಟ