6 ವರ್ಷಗಳಲ್ಲಿ ಡಾ. ಚಂದ್ರಶೇಖರ ಪಾಟೀಲ ಸಾಧನೆ ಶೂನ್ಯ: ಅಮರನಾಥ ಪಾಟೀಲ

ಬೀದರ್:ಮೇ.18: ಆರು ವರ್ಷಗಳ ತನ್ನ ಅವಧಿಯಲ್ಲಿ ಡಾ. ಚಂದ್ರಶೇಖರ ಪಾಟೀಲ ಅವರ ಸಾಧನೆ ಶೂನ್ಯ. ಅವರು ಎಷ್ಟು ಜಿಲ್ಲೆಗಳಲ್ಲಿ ನಿಯಮಿತ ಪ್ರವಾಸ ಕೈಗೊಂಡಿದ್ದಾರೆ? ಸದನದಲ್ಲಿ ಎಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ? ಸದನದಲ್ಲಿ ಅವರ ಹಾಜರಾತಿ ಎಷ್ಟು? ಎಂಬುದನ್ನು ಮೊದಲು ಉತ್ತರಿಸಲಿ. ಈ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಈಶಾನ್ಯ ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಸವಾಲ್ ಎಸೆದಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, . ಪಾಟೀಲರು ತಮ್ಮ ಆರು ವರ್ಷಗಳಲ್ಲಿ ಅವಧಿಯಲ್ಲಿ ಪದವೀಧರರಿಗೆ ನ್ಯಾಯ ಒದಗಿಸಿಲ್ಲ. ಆದ್ದರಿಂದ ಅವರ ಹೆಸರಿನ ಮುಂದೆ ‘ಡಾ’ ಬದಲು ‘ಢ’ ಎಂದು ಸೇರಿಸಬೇಕಾ ಎಂದು ಪ್ರಶ್ನಿಸಿದರು.
ನಾನು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಶ್ನೆ ಮಾಡಿದ್ದೇನೆ. ಕ.ಕ. ಭಾಗಕ್ಕೆ ಸರ್ಕಾರ ಮಾಡುತ್ತಿರುವ ಮಲತಾಯಿ ಧೋರಣೆಗೆ ಸದನದ ಬಾವಿಗಿಳಿದು ಹಲವು ಬಾರಿ ಧರಣಿ ಸತ್ಯಾಗ್ರಹ ನಡೆಸಿದ್ದೇನೆ. ಕ.ಕ.ಕ್ಕೆ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ, ಈ ಭಾಗದ ಖಾಲಿ ಹುದ್ದೆಗಳ ಭರ್ತಿ, ಪದೋನ್ನತಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಮುಂದೆಯೂ ಮಾಡುವ ಅವಕಾಶ ನೀಡಬೇಕೆಂದು ಕೋರಿದರು. ನನ್ನ ಸಾಧನೆ ಬಿಚ್ಚು ಪುಸ್ತಕದಂತೆ. ನಾನು ಮಾಡಿರುವ ಸಾಧನೆ ಸಾಕ್ಷಿ ಸಮೇತವಾಗಿ ತೋರಿಸಿ ಮತ ಯಾಚಿಸುತ್ತಿದ್ದೇನೆ. ಆದ್ದರಿಂದ ಮೊದಲ ಪ್ರಾಶಸ್ತ??ದ ಮತ ನೀಡಿ ಗೆಲ್ಲಿಸಬೇಕೆಂದು ಅಮರನಾಥ ಪಾಟೀಲ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಪಕ್ಷದ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಪ್ರಮುಖರಾದ ಮಾಧವ ಹಸೂರೆ, ಅರಹಂತ ಸಾವಳೆ, ಬಾಬುರಾವ ಕಾರಬಾರಿ, ಬಾಬು ವಾಲಿ, ಲಿಂಗರಾಜ ಬಿರಾದಾರ, ಬಸವರಾಜ ಪವಾರ್, ಶಶಿಧರ ಸೂಗುರ ಉಪಸ್ಥಿತರಿದ್ದರು.


ಗೃಹಸಚಿವರು ರಾಜೀನಾಮೆ ನೀಡಲಿ : ಸೋಮನಾಥ ಪಾಟೀಲ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಿರಂತರ ಸರಣಿ ಕೊಲೆಗಳು ನಡೆಯುತ್ತಿವೆ. ಇದಕ್ಕೆ ಸೇಡಂ, ಹುಬ್ಬಳ್ಳಿ, ಯಾದಗಿರಿ ಸೇರಿದಂತೆ ಹಲವು ಕೊಲೆ ಪ್ರಕರಣಗಳು ಸಾಕ್ಷಿಯಾಗಿವೆ. ಸರ್ಕಾರದ ತುಷ್ಟಿಕರಣ ನೀತಿ ಮತ್ತು ಗೂಂಡಾ ಸಂಸ್ಕøತಿ ಎತ್ತಿ ಕಟ್ಟುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿಯೇ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿತು. ಗೃಹಸಚಿವರು ಇದ್ದಾರೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ಗೃಹಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದರೂ ಯಾವ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ. ಸ್ವತಃ ಕಾಂಗ್ರೇಸ್ ಶಾಸಕರೇ ಈ ಕುರಿತು ಅಸಮಾಧಾನ ಹೊರಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಶಾಸಕರೇ ಸ್ವತಃ ದಂಗೆ ಎದ್ದು ಸರ್ಕಾರ ಬೀಳಿಸುತ್ತಾರೆ ಎಂದು ಪಾಟೀಲ ಭವಿಷ್ಯ ನುಡಿದರು. ಅಮರನಾಥ ಪಾಟೀಲ ಒಬ್ಬ ಬೀದರ ಜಿಲ್ಲೆಯ ಮೊಮ್ಮಗ ಮತ್ತು ಅಳಿಯ ಹೌದು. ಸಂಘಟನಾ ಚತುರರು, ಜನಸೇವಕ. ಅವರಿಗೆ ಮತ ನೀಡಿ ಗೆಲ್ಲಿಸಿರಿ ಎಂದು ಪಾಟೀಲ ಮನವಿ ಮಾಡಿಕೊಂಡರು. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳು, ಈಶಾನ್ಯ ಪದವೀಧರರ ಚುನಾವಣೆಯಲ್ಲಿ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಕಂಪನಿಗಳು ಸುಗಮವಾಗಿ ನಡೆಯುತ್ತಿವೆ. ಹಲವು ವಾಹನಗಳ ಬಿಡಿ ಭಾಗಗಳು ಭಾರತದಲ್ಲಿಯೇ ತಯಾರಾಗುತ್ತಿವೆ. ಸಚಿವ ಖೂಬಾ ಅವರ ಪ್ರಯತ್ನದೊಂದಿಗೆ ಔರಾದ ತಾಲೂಕಿನಲ್ಲಿ 13 ಸಾವಿರ ಕೋಟಿ ಅನುದಾನದ ಸೋಲಾರ್ ಪಾರ್ಕ್ ಸ್ಥಾಪನೆಯಾಗಲಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡುತ್ತಿಲ್ಲ. ಸೋಲಾರ್ ಪಾರ್ಕ್ ಸ್ಥಾಪನೆಯಾದರೆ ಜಿಲ್ಲೆಯ 11 ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ. ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ತಿಳಿಸಿದರು.