
ಕೋಲಾರ,ಮಾ,೫- ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದ ಅರೋಪಿಗಳ ಕಾರನ್ನು ಅಬಕಾರಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆ ರಾಷ್ಟ್ರೀಯ ಹೆದ್ದಾರಿ ನರಸಾಪುರ ಸಮೀಪ ತಡೆದು ಪರಿಶೀಲಿಸಿದಾಗ ೬ ಲಕ್ಷ ರೂ ಮೌಲ್ಯದ ಗಾಂಜಾ ಹಾಗೂ ಸಾಗಣಿಗೆ ಬಳಿಸಿದ್ದ ಕಾರನ್ನು ವಶಪಡೆಸಿ ಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡೆಸಿದ ಘಟನೆ ಶನಿವಾರ ನಡೆದಿದೆ.
ಬಂಧಿತ ಆರೋಪಿಯನ್ನು ಕೋಲಾರ ರಹಮತ್ ನಗರದ ನಿವಾಸಿ ಮಹಮ್ಮದ್ ಶೋಯಬ್ ಬಿನ್ ಮಹಮ್ಮದ್ ಶಾಹಿದ್ ಪಾಷ, ೨೩ ವರ್ಷ ಎಂದು ಗುರುತಿಸಲಾಗಿದೆ. ಕೆಎ-೦೫ ಎಂ.ಹೆಚ್-೪೪೦೦ ಕಪ್ಪುಬಣ್ಣದ ಸ್ಯಾಂಟ್ರೋ ಕಾರ್‌ನಲ್ಲಿ ನರಸಾಪುರ ರಸ್ತೆಯ ವ್ಯಾಲಿ ಪಬ್ಲಿಕ್ ಶಾಲೆಯ ಮುಂಭಾಗದ ಎನ್.ಹೆಚ್-೭೫ ಸರ್ವೀಸ್ ರಸ್ತೆಯ ಬಳಿ ತಡೆದು ಪರಿಶೀಲಿಸಿದಾಗ ೧೦.೭೦೮ ಕೆ.ಜಿ ಗಾಂಜಾ ಪತ್ತೆಯಾಗಿದೆ.
ಅಬಕಾರಿ ಇಲಾಖೆಯ ಬೆಂಗಳೂರಿನ ದಕ್ಷಿಣ ವಿಭಾಗದ ಜಂಟಿ ಆಯುಕ್ತ ನಾಗೇಶ್.ಎ.ಎಲ್ ಅವರು ನೀಡಿದ ನಿರ್ದೇಶನದ ಮೇರೆಗೆ ಜಿಲ್ಲಾ ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಹೆಚ್.ರಮೇಶ್ ಕುಮಾರ್ ರವರ ಮಾರ್ಗದರ್ಶನ ಮತ್ತು ಶೈಲ ಅವಜಿ ನೇತ್ರತ್ವದಲ್ಲಿ ಕಂದಾಯ ಇಲಾಖೆ ಮತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಖಚಿತ ಭಾತ್ಮಿಯಂತೆ ಬೆಂಗಳೂರು ಕಡೆಯಿಂದ ಕೋಲಾರ ಕಡೆಗೆ ಬರುವ ನರಸಾಪುರ ರಸ್ತೆಯ ವ್ಯಾಲಿ ಪಬ್ಲಿಕ್ ಶಾಲೆಯ ಮುಂಭಾಗದ ಎನ್.ಹೆಚ್-೭೫ ಸರ್ವೀಸ್ ರಸ್ತೆಯಲ್ಲಿ ತಡೆದು ಕಾರನ್ನು ವಶಕ್ಕೆ ಪಡೆದು ಹಾಗೂ ಅರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಬಕಾರಿ ನಿರೀಕ್ಷಕರಾದ ಅರುಣಾ ಪ್ರಕರಣವನ್ನು ದಾಖಲಿಸಿದರು. ಕಾರ್ಯಾಚರಣೆಯಲ್ಲಿ ಇಲಾಖೆಯ ಸಿಬ್ಬಂದಿಗಳಾದ ಜಯಣ್ಣ.ಎಸ್ ಅಬಕಾರಿ ಉಪ ನಿರೀಕ್ಷಕರು ಅನಿಲ್ ಕುಮಾರ್ ಕೆ.ಎಸ್, ಸಾಬು ಕಾತ್ರಾಳ ಮತ್ತು ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.