6 ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಕಲಬುರಗಿ: ಜ.1 ರಿಂದ ಶಾಲೆ-ಕಾಲೇಜು ಪುನರಾರಂಭ

ಕಲಬುರಗಿ,ಡಿ.28-ಜಿಲ್ಲೆಯಲ್ಲಿ ಜನವರಿ 1 ರಿಂದ ಶಾಲೆ-ಕಾಲೇಜು (10 ಮತ್ತು 12ನೇ ತರಗತಿ) ಪುನರಾರಂಭಿಸಲಾಗುವುದು ಮತ್ತು 6 ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ.ಪಿ.ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಸೂಚನೆ ಮತ್ತು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿಯಂತೆ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗುತ್ತಿದೆ. 6 ರಿಂದ 9ನೇ ತರಗತಿಯವರೆಗೆ ಮಾತ್ರ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಅನುಭವದ ಆಧಾರದ ಮೇಲೆ ಜ.14ರ ನಂತರ 1 ರಿಂದ 5ನೇ ತರಗತಿಯವರೆಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
10ನೇ ವಿದ್ಯಾರ್ಥಿಗಳಿಗೆ ವಾರದ ಆರು ದಿನ ಬೆಳಿಗ್ಗೆ 10 ರಿಂದ 12.30ರವರೆಗೆ ಮೂರು ಅವಧಿಗಳಲ್ಲಿ ತರಗತಿಗಳನ್ನು ನಡೆಸಲಾಗುವುದು.
@12bc = ಮುನ್ನೆಚ್ಚರಿಕೆ ಕ್ರಮ
ತರಗತಿಗಳನ್ನು ಆರಂಭಿಸಿದರೂ ಶಾಲೆಯಲ್ಲಿ ಯಾವುದೇ ರೀತಿಯ ಸಾಮೂಹಿಕ ಪ್ರಾರ್ಥನೆ, ಆಟ ಇರುವುದಿಲ್ಲ. ಮಧ್ಯಾಹ್ನದವರೆಗೆ ಮಾತ್ರ ಶಾಲೆ ಇರುವುದರಿಂದ ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ವಿತರಿಸುವುದನ್ನು ಮುಂದುವರಿಸಲಾಗುವುದು. ಒಂದು ತರಗತಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳಿಗೆ ಕೂರಲು ಮಾತ್ರ ಅವಕಾಶ ಕಲ್ಪಿಸಲಾಗುವುದು. ಪ್ರತಿ ಮಗು ಶಾಲೆಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್ ಬಳಸಬೇಕು ಮತ್ತು ಶಾಲೆಯೊಳಗೆ ಪ್ರವೇಶಿಸುವ ಮುನ್ನ ಮತ್ತು ಶಾಲೆಯಿಂದ ಹೊರ ಹೋಗುವ ಮುನ್ನ ಕೈಗಳನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛವಾಗಿರಿಸಿಕೊಳ್ಳಲು ಸೂಚಿಸಲಾಗುವುದು. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರನ್ನು ತರಲು ತಿಳಿಸಲಾಗುವುದು. ಮನೆಯಿಂದ ನೀರು ತರದೇ ಇರುವ ಮಕ್ಕಳಿಗೆ ಶಾಲೆಯಲ್ಲಿ ಬಿಸಿ ನೀರು ಕೊಡುವ ವ್ಯವಸ್ಥೆ ಕಲ್ಪಿಸಲಾಗುದು ಎಂದು ತಿಳಿಸಿದರು.
ಪ್ರತಿಯೊಂದು ಶಾಲೆಯಲ್ಲಿ ಐಸೋಲೇಷನ್ ರೂಮ್ ಮಾಡಲಾಗುವುದು, 15 ಮಗುವಿಗೆ ಒಬ್ಬ ಮಾರ್ಗದರ್ಶಕರನ್ನು ನೇಮಿಸಲಾಗುವುದು. ಮಗುವಿಗೆ ಕೆಮ್ಮು, ಜ್ವರದಂತಹ ರೋಗ ಲಕ್ಷಣಗಳು ಕಂಡುಬಂದಿಲ್ಲಿ ಮಾರ್ಗದರ್ಶಕರು ಈ ಬಗ್ಗೆ ನಿಗಾವಹಿಸುವರು ಎಂದು ತಿಳಿಸಿದರು.
ಶಿಕ್ಷಕರು ಶಾಲೆ ಪ್ರಾರಂಭಕ್ಕಿಂತ ಮುಂಚೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು (ಆರ್.ಟಿ.ಪಿ.ಸಿ.ಆರ್) ವೈದ್ಯಕೀಯ ಪರೀಕ್ಷೆಯ ವರದಿ ನೆಗೆಟಿವ್ ಇದ್ದಲ್ಲಿ ಮಾತ್ರ ತರಗತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರು ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ. ಅನುಮತಿ ಪತ್ರದಲ್ಲಿ ಮಗುವಿಗೆ ಯಾವುದೇ ಕೋವಿಡ್-19 ಸೋಂಕಿನ ಲಕ್ಷಣಗಳಿಲ್ಲದಿರುವುದನ್ನು ದೃಢೀಕರಿಸಿರಬೇಕು
6 ರಿಂದ 9ನೇ ತರಗತಿ ಮಕ್ಕಳು ತಾವಿರುವ ಶಾಲೆಗೆ ಹೋಗಿಯೇ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗಬೇಕು ಅಂತೇನಿಲ್ಲ. ತಾವಿರುವ ಸ್ಥಳದಲ್ಲಿನ ಶಾಲೆಗಳ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಪಿ.ಬಾಡಗಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.