6 ರಂದು ” ಮನದಾಳದ ಮಾತು” ಕೃತಿ ಬಿಡುಗಡೆ

ಕಲಬುರಗಿ,ನ.3-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ.6 ರಂದು ಬೆಳಿಗ್ಗೆ 10.30ಕ್ಕೆ”ಸಾಧಕರ ಮನದಾಳದ ಮಾತು” ಕೃತಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳ ಸಾಧಕರ ಜೀವನ ಪರಿಚಯಿಸುವ ಉದ್ದೇಶದಿಂದ 2016ರ ಜುಲೈ ತಿಂಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ” ಮನದಾಳದ ಮಾತು” ಕಾರ್ಯಕ್ರಮ ಆರಂಭಿಸಲಾಯಿತು. ಇಲ್ಲಿಯವರೆಗೆ ಸಾಹಿತ್ಯ, ನಾಟಕ, ಕಲೆ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದ 25 ಜನ ಸಾಧಕರು ಭಾಗವಹಿಸಿ ತಮ್ಮ ಅನುಭವದ ಬುತ್ತಿ ಬಿಚ್ಚಿಟ್ಟಿದ್ದಾರೆ. ಅದಕ್ಕೆ ದಾನಿಗಳ ನೆರವಿನಿಂದ ಪುಸ್ತಕ ರೂಪ ನೀಡಲಾಗಿದೆ. ಈ ಪುಸ್ತಕವನ್ನು ಡಾ.ವಿಜಯಕುಮಾರ ಜಿ.ಪರುತೆ ಸಂಪಾದಿಸಿದ್ದಾರೆ ಎಂದು ತಿಳಿಸಿದರು.
ಹಾರಕೂಡದ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡುವರು. ಪ್ರಾಧ್ಯಾಪಕ ಕಲ್ಯಾಣರಾವ ಪಾಟೀಲ ಕೃತಿ ಕುರಿತು ಮಾತನಾಡುವರು. ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾಗವಹಿಸುವರು.
ಪೂಜ್ಯ ದೊಡ್ಡಪ್ಪ ಅಪ್ಪ, ಸುರಪುರದ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಹಲವು ಸಾಧಕರ ಕುರಿತು ವಿಸ್ತೃತ ಮಾಹಿತಿ ದೊರೆಯುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅವರ ಕುರಿತು “ಮರಿಯಲಿ ಹ್ಯಾಂಗ ನಿಮ್ಮ” ಎನ್ನುವ ಪುಸ್ತಕ ಪ್ರಕಟಿಸುವ ಯೋಜನೆಯೂ ಇದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಜಿ.ಪರುತೆ, ಮಡಿವಾಳಪ್ಪ ನಾಗರಹಳ್ಳಿ, ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿಪಾಟೀಲ, ಶಿವಾನಂದ ಕಶೆಟ್ಟಿ, ಅಂಬಾಜಿ, ಆನಂದ ನಂದೂರಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.