6 ಜನ ನಕಲಿ ವೈದ್ಯರು ವಶಕ್ಕೆ

ಬಳ್ಳಾರಿ,ಮೇ02:ಸಂಡೂರು ತಹಸೀಲ್ದಾರ್ ರಶ್ಮೀ ಹಾಗೂ ಸಿರಗುಪ್ಪ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ವಿವಿಧೆಡೆ ನಿನ್ನೆ ‌ ದಿಢೀರ್ ಕಾರ್ಯಾಚರಣೆ ನಡೆಸಿ 5 ಜನ ನಕಲಿ ವೈದ್ಯರನ್ನು ಪತ್ತೆಹಚ್ಚಿ,ಅವರು ನಡೆಸುತ್ತಿದ್ದ ಕ್ಲಿನಿಕ್ ಸೀಜ್ ಮಾಡಲಾಗಿದ್ದು, ಆ ನಕಲಿ ವೈದ್ಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಂಡೂರು ತಾಲೂಕಿನ ಸೋವೆನಹಳ್ಳಿಯಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೇ ಕರ್ನೂಲ್ ಮೂಲದ ಎಂ.ಷಣ್ಮಖುಡು ಹಾಗೂ ರಾಮು ಎನ್ನುವವರು ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಂಡೂರು ತಹಸೀಲ್ದಾರ್ ರಶ್ಮಿ ಎಚ್.ಜೆ ಹಾಗೂ ಆರೋಗ್ಯ ಇಲಾಖೆಯ ಡಾ.ಕೋಟ್ರೇಶ್ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ 37 ವರ್ಷದ ಷಣ್ಮುಖುಡು ಹಾಗೂ 33 ವರ್ಷದ ರಾಮು ಎನ್ನುವವರು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಪಡೆದ ಯಾವುದೇ ಅಧಿಕೃತ ದಾಖಲೆಗಳು ಹೊಂದಿರಲಿಲ್ಲ. ವೈದ್ಯಕೀಯ ಪದವಿ ಪಡೆಯದಿರುವುದು ಕಂಡುಬಂದಿದೆ.
ತಾವು ಅಸಲಿ ಡಾಕ್ಟರ್‍ಗಳೆಂದು ಜನರನ್ನು ನಂಬಿಸಿ ಚಿಕಿತ್ಸೆ ನೀಡಿ ಮೋಸ ಮಾಡುತ್ತಿದ್ದರು. ಸದರಿ ವ್ಯಕ್ತಿಗಳ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಲಾಗಿದೆ.
ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೆಣತಿಕಟ್ಟೆಯಲ್ಲಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳಿರದೇ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಗುರುಬಸವರಾಜ ಎ.ಎಂ ಅವರ ಮೇಲೆ ಕಾರ್ಯಾಚರಣೆ ನಡೆಸಿ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಿಕೊಂಡು ಗುರುಬಸವರಾಜರನ್ನು ಬಂಧಿಸಿ ದೆ. ಈ ಬಗ್ಗೆ ಸಹ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹರಪನಳ್ಳಿ ತಾಲೂಕಿನ ತೌಡೂರು ಗ್ರಾಮದವರಾದ 44 ವರ್ಷದ ಗುರುಬಸವರಾಜ ಅವರು ಗೆಣತಿಕಟ್ಟೆ ಜನರಿಗೆ ಅಸಲಿ ಡಾಕ್ಟರ್ ಅಂತ ನಂಬಿಸಿ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಇದೇ ರೀತಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳನ್ನಿಟ್ಟುಕೊಳ್ಳದೇ ತಾವೇ ಅಸಲಿ ಡಾಕ್ಟರ್‍ಗಳೆಂದು ನಂಬಿಸಿ ಚೋರನೂರು ಗ್ರಾಮದ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಕಲ್ಕತ್ತಾ ಮತ್ತು ಆಂಧ್ರಪ್ರದೇಶ ಮೂಲದ ವಿಜಯಕುಮಾರ್ ಮತ್ತು ವಿಶ್ವಜೀತ್ ಮೌಲ್ಲಿ ಅವರ ಕ್ಲಿನಿಕ್ ಕೂಡ ಸೀಜ್ ಮಾಡಲಾಗಿದ್ದು, ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಇದೇ ರೀತಿ ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಯಾವುದೇ ರೀತಿಯ ವೈದ್ಯಕೀಯ ಪದವಿ ಹೊಂದದೇ ಹಾಗೂ ದಾಖಲೆಗಳನ್ನಿಟ್ಟುಕೊಳ್ಳದೇ ಚನ್ನಪ್ಪ ಎನ್ನುವವರು ನಕಲಿವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ನೇತೃತ್ವದ ತಂಡ ದಾಳಿ ನಡೆಸಿದೆ.
ಗ್ರಾಮದ ಗಾದಿಲಿಂಗೇಶ್ವರ ಮೆಡಿಕಲ್ ಸ್ಟೋರ್ ಹಿಂದುಗಡೆ ಒಂದು ಕೊಣೆಯಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚನ್ನಪ್ಪ ಎನ್ನುವ ನಕಲಿ ವೈದ್ಯ ಡಿ.ಫಾರ್ಮ್ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ಮತ್ತು ಪಿ.ಡಿ.ಹಳ್ಳಿ ಗ್ರಾಮದವರೆಂದು ತಿಳಿಸಿದ್ದಾರೆ.
ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಟ್ಟುಕೊಂಡಿರಲಿಲ್ಲ. ಅಸಲಿ ವೈದ್ಯರೆಂದು ಜನರಿಗೆ ನಂಬಿಸಿ ಚಿಕಿತ್ಸೆ ನೀಡಿ ಮೋಸ ಮಾಡುತ್ತಿದ್ದ. ಈ ವ್ಯಕ್ತಿಯ ಕ್ಲಿನಿಕ್ ಮತ್ತು ಮೆಡಿಕಲ್ ಎರಡನ್ನು ಜಪ್ತಿ ಮಾಡಿ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಹಳ್ಳಿ ಜನಗಳ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡು ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ; ಜನರು ಕೋವಿಡ್ ತಗುಲಿದ ನಂತರ ಗಂಭೀರವಾದಾಗ ಕೋವಿಡ್ ಆಸ್ಪತ್ರೆಗಳಿಗೆ ಬರುತ್ತಿದ್ದು,ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಹಸೀಲ್ದಾರರುಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾದ ಹಿನ್ನಲೆಯಲ್ಲಿ ಈ ಕ್ರಮ‌ಜರುಗಿದೆ.