6ರಂದು ಗೋಲಗೇರಿ ಗೊಲ್ಲಾಳೇಶ್ವರ ಜಾತ್ರೆ

ಕಲಬುರಗಿ,ಏ 3: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗೊಲ್ಲಾಳೇಶ್ವರ ಜಾತ್ರೆ ಏ.6 ರಂದು ಅದ್ಧೂರಿಯಾಗಿ ನಡೆಯಲಿದೆ. ಇಲ್ಲಿನ ರಥೋತ್ಸವ ಉತ್ತರ ಕರ್ನಾಟಕ,ಕಲ್ಯಾಣ ಕರ್ನಾಟಕ ಗಡಿಭಾಗದ ದೊಡ್ಡ ಆಕರ್ಷಣೆಯಾಗಿದ್ದು,ಧರ್ಮದರ್ಶಿಗಳ ನೇತೃತ್ವದಲ್ಲಿ ಜರುಗುವದು. ಭ್ರಮರಗಳ ರೂಪದಲ್ಲಿ ಬರುವ ದೇವರು ತೇರು ಎಳೆಯಲು ಅನುಮತಿ ನೀಡುತ್ತಾನೆ ಎನ್ನುವ ನಂಬಿಕೆ ಇದೆ. ರಥ ಸಾಗಿ ಮರಳಿ ಜಾಗಕ್ಕೆ ಬರುವರೆಗೂ ಧರ್ಮದರ್ಶಿಗಳ ಪ್ರಸಾದ ಸ್ವೀಕರಿಸುವದಿಲ್ಲ. ಒಂದೊಂದು ಸಲ ತೇರು ಅವತ್ತೇ ವಾಪಸ್ಸು ಬರುವುದಿಲ್ಲ. ಅಂದು ತೇರಿನ ಹತ್ತಿರವೇ ಧರ್ಮದರ್ಶಿಗಳು ಮೊಕ್ಕಾಂ ಮಾಡುತ್ತಾರೆ. ಇವರ ಸ್ನಾನ ಪೂಜೆ ಎಲ್ಲ ರಥದ ಹತ್ತಿರ ನಡೆಯುವದು.ಹಗ್ಗ (ಮಿಣಿ) ಧರ್ಮದರ್ಶಿಗಳ ದೇವರ ಮನೆಯ ಜಗುಲಿ ತಲುಪಿದಾಗ ಮಾತ್ರ ತೇರು ಜಾಗಕ್ಕೆ ಬಂದಂತೆ.ಒಂದು ಪಂಚ ಲೋಹದ ಕಳಸ, ಭೂ ಚಕ್ರ, ಕೊಡೆ, ಕುದುರೆ, ಸಿಂಹಗಳಿಂದ ಅಲಂಕೃತವಾಗುವ ರಥಕ್ಕೆ ಪ್ರತಿ ವರ್ಷ ಎರಡು ಬ್ಯಾರಲ್ ಒಳ್ಳೆಣ್ಣೆ ಹಚ್ಚಲಾಗುವದು ಎಂದು
ಗುರುರಾಜ ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.