6ನೇ ವೇತನ ಆಯೋಗ ಜಾರಿ ಕಷ್ಟ; ಎಸ್ಮಾ ಜಾರಿಗೆ ಪರೋಕ್ಷ ಎಚ್ಚರಿಕೆ

ಬೆಂಗಳೂರು, ಏ 8- ಸರ್ಕಾರಿ ನೌಕರರಿಗೆ ನೀಡಲಾಗುವ ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಸರಿ ಸಮನಾದ ವೇತನ ನೀಡಲು ಸಾಧ್ಯವಿಲ್ಲ. ಆದರೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ವೇತನ ಪರಿಷ್ಕರಣೆ ಮಾಡುವುದಾಗಿ ಮಾತುಕೊಟ್ಟಿದ್ದೇವೆ‌ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ‌ಫರ್ವೇಜ್ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಮತ್ತು ಚಾಮರಾಜನಗರದಲ್ಲಿ ಕ್ವಾರ್ಟರ್ಸ್ ಖಾಲಿ ಮಾಡಿಸುವ ನೊಟೀಸ್ ಕೊಟ್ಟಿದ್ದನ್ನು ತಡೆ ಹಿಡಿದಿದ್ದೇವೆ. ಯಾರನ್ನು ಮನೆ ಖಾಲಿ ಮಾಡಿಸಲ್ಲ. ಎಸ್ಮಾ ಜಾರಿ ಮಾಡಲು ಅವಕಾಶವಿದೆ. ಜೂನ್ ವರೆಗೆ ಎಸ್ಮಾ ಜಾರಿಯ ಅವಕಾಶವನ್ನು ಕಾರ್ಮಿಕ ಇಲಾಖೆ ನೀಡಿದೆ. ಪರಿಸ್ಥಿತಿ ಬಂದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದು ಅವರು‌ ಎಚ್ಚರಿಕೆ ನೀಡಿದರು.
ಸಾರಿಗೆ ವಿಭಾಗಗಳಲ್ಲಿ 20,000 ಬಸ್ ಗಳಿವೆ. ದಿನನಿತ್ಯ 40 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಮುಷ್ಕರದಿಂದ ಜನರಿಗೆ ಅನಾನುಕೂಲವಾಗಿದೆ‌. ಪೂರ್ಣ ಪ್ರಮಾಣದಲ್ಲಿ ಪರ್ಯಾಯ ವ್ಯವಸ್ಥೆ ಸಾಧ್ಯವಾಗದೇ ಇದ್ದರು ಭಾಗಶಃ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ನಮ್ಮ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ ಎಂದರು.
ಯಾರು ಪ್ರತಿಭಟನೆ ಮಾಡುತ್ತಿದ್ದಾರೆ, ಪ್ರಚೋದನೆ ಮಾಡಿದ್ದಾರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ದಿನಕ್ಕೆ 20 ಕೋಟಿ ನಷ್ಟವಾಗುತ್ತಿದೆ‌. ಈಗಾಗಲೇ 40 ಕೋಟಿ ನಷ್ಟವಾಗಿದೆ. ಹಾಗಾಗಿ ಹಠ ಬಿಟ್ಟು ಕರ್ತವ್ಯಕ್ಕೆ ಬನ್ನಿ ಎಂದು ಮನವಿ ಮಾಡುತ್ತಿದ್ದೇವೆ. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ದ. ಅವರು ಹಠ ಬಿಟ್ಟು ಬರಲಿ. ತಕ್ಷಣ ಒಂದು ಮಧ್ಯಂತರ ಪರಿಹಾರವಾಗಿ ಶೇ.10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ದ. ನಂತರ ಉಳಿದ ಶೇ.2ರಷ್ಟು ನಂತರದ ದಿನಗಳಲ್ಲಿ ಹೆಚ್ಚಿಸಬಹುದು ಎಂದು ಮನವಿ ಮಾಡಿದರು.