6ನೇ ಬಾರಿ ರೆಪೊ ದರ ಯಥಾಸ್ಥಿತಿ

ನವದೆಹಲಿ, ಜೂ.೪- ಸತತ ಆರನೇ ಬಾರಿಯೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದರಿಂದಾಗಿ ಈ ಬಾರಿಯೂ ಗೃಹ ಸಾಲಗಾರರ ನಿರೀಕ್ಷೆ ಹುಸಿಯಾಗಿದೆ.
ಆರ್‌ಬಿಐ ಇಂದು ದ್ವೈಮಾಸಿಕ ಹಣಕಾಸು ನೀತಿಯ ಪರಿಶೀಲನೆ ನಡೆಸಿದ್ದು, ರೆಪೊ ದರವನ್ನು ಈ ಹಿಂದಿನ ಶೇ.೪ರಷ್ಟು ಹಾಗೂ ರಿವರ್‍ಸ್ ರೆಪೋ ದರವನ್ನು ೩.೩೫ರಷ್ಟರಲ್ಲೆ ಮುಂದುವರೆಸಲಾಗಿದೆ ಎಂದು ಆರ್‌ಬಿಐ ಗವರ್ನರ್ ದೆಹಲಿಯಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.
ದೇಶದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಎರಡನೇ ಅಲೆಯ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೆಪೋ ದರ ಯಥಾಸ್ಥಿತಿ ಮುಂದುವರಿಕೆಯಿಂದಾಗಿ ಗೃಹ ಮತ್ತು ವಾಹನಗಳ ಮೇಲಿನ ಸಾಲದ ಕಂತು ಇಳಿಕೆಯಾಗಲಿದೆ ಎಂದು ಗ್ರಾಹಕರ ನಿರೀಕ್ಷೆ ಈಡೇರಿಲ್ಲ.
ಪ್ರಸಕ್ತ ೨೦೨೧-೨೨ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯಲ್ಲಿ ಶೇಕಡಾ ೯.೫ ರಷ್ಟು ಬೆಳವಣಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ. ಕೊರೊನಾ ಪರಿಣಾಮದ ಬಗ್ಗೆ ರಿಸರ್ವ್ ಬ್ಯಾಂಕ್ ಗಮನ ನೀಡಲಿದೆ. ನಂತ್ರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಈ ವರ್ಷ ಚಿಲ್ಲರೆ ಹಣದುಬ್ಬರ ಶೇಕಡಾ ೫.೧ ರಷ್ಟಿರಬಹುದು ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಹಣಕಾಸು ನೀತಿ ಸಮಿತಿಯ ಹಿಂದಿನ ಸಭೆಯಲ್ಲೂ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.
ಕೊರೊನಾ ಎರಡನೇ ಅಲೆಯಿಂದಾಗಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದ ಅನೇಕ ಭಾಗಗಳಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೇರಿರುವುದ್ರಿಂದ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅದಕ್ಕಾಗಿಯೇ ಈ ಸಭೆ ಬಹಳ ಮುಖ್ಯವಾಗಿತ್ತು.
ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆದರೆ ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ಬ್ಯಾಕಿಂಗ್ ವಲಯದಲ್ಲಿ ಸಮತೋಲನ ಸಾಧಿಸಲು ರಿವರ್ಸ್ ರೆಪೊ ದರ ಪ್ರಮುಖ ಪಾತ್ರ ವಹಿಸುತ್ತದೆ.